35 ಲಕ್ಷ ಕಾರ್ಮಿಕರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ: ಸಚಿವ ಸಂತೋಷ್ ಲಾಡ್

ವಿಜಯನಗರ(ಹೊಸಪೇಟೆ) : ರಾಜ್ಯದಲ್ಲಿರುವ ವಿವಿಧ 91 ವರ್ಗಗಳ 35 ಲಕ್ಷ ಕಾರ್ಮಿಕರನ್ನು ಗುರುತಿಸಿ, ಉಚಿತವಾಗಿ ನೋಂದಾಯಿಸಿ ವಿವಿಧ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಜನರ ದುಡ್ಡನ್ನು ಜನರಿಗೆ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶುಕ್ರವಾರ ಹೊಸಪೇಟೆಯಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗಿತ್ತು. ಹೊಸದಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಪಾರಂಪಾರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟು 91 ವರ್ಗಗಳ ಕಾರ್ಮಿಕರನ್ನು ಗುರುತಿಸಿ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಈ ಯೋಜನೆಯಡಿಯಲ್ಲಿ ಅಪಘಾತ ಪರಿಹಾರ ಸೌಲಭ್ಯ, ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಸಂಪೂರ್ಣ ದುರ್ಬಲತೆ ಹೊಂದಿದಲ್ಲಿ ಅವರ ನಾಮನಿದೇರ್ಶಿತರಿಗೆ 1 ಲಕ್ಷ ರೂ. ಪರಿಹಾರ, ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕೆ 50 ಸಾವಿರ ರೂ., ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ 10 ಸಾವಿರ ರೂ.ಗಳ ಧನ ಸಹಾಯ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲದೇ 2024ರಲ್ಲಿ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ರೂಪಿಸಿ ಅಧಿನಿಯಮವನ್ನು ಜಾರಿಗೊಳಿಸಿ 20 ವರ್ಗಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ಅಪಘಾತದಿಂದ ಫಲಾನುಭವಿ ನಿಧನರಾದರೆ 5 ಲಕ್ಷ ರೂ. ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ. ವರೆಗೆ ಪರಿಹಾರ, ತಾತ್ಕಾಲಿಕ ದುರ್ಬಲತೆ ಹೊಂದಿದರೇ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ರೂ. ವರೆಗೆ ಪರಿಹಾರ, ಮೃತರ ಕುಟುಂಬದ ಇಬ್ಬರು ಮಕ್ಕಳಿಗೆ 1 ರಿಂದ ಪದವಿವರೆಗೆ ತಲಾ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಪೆಟ್ರೋಲ್ ಮತ್ತು ಡಿಸೇಲ್‍ನಿಂದ ರಾಜ್ಯಕ್ಕೆ ಬರುವ ತೆರಿಗೆ ಸಂಗ್ರಹದಲ್ಲಿ ಕನಿಷ್ಠ ಶೇ.1ರಷ್ಟು ಹಣವನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಒಪ್ಪಿಗೆ ಸಿಕ್ಕರೆ ವಾರ್ಷಿಕ 2,200 ಕೋಟಿ ರೂ. ಸಂಗ್ರಹವಾಗಲಿದೆ. ಅದನ್ನು ನೇರವಾಗಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ಬಳಸಲಾಗುವುದು ಎಂದು ಸಂತೋಷ್ ಲಾಡ್ ಭರವಸೆ ನೀಡಿದರು.
ರಾಜ್ಯ ಸರಕಾರ ಅಡಳಿತಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿಗಳ ಅನುಷ್ಠಾನದ ವಿರುದ್ಧ ವಿಪಕ್ಷಗಳು ಸೇರಿದಂತೆ ಹಲವರು ಟೀಕೆ ಮಾಡಿದ್ದರು. ಕೇವಲ ಎರಡು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದ ಜನತೆಗೆ ವರ್ಷಕ್ಕೆ ನೇರವಾಗಿ 60 ಸಾವಿರ ಕೋಟಿ ರೂ. ಗಳಂತೆ, ಐದು ವರ್ಷಕ್ಕೆ 3 ಲಕ್ಷ ಕೋಟಿ ರೂ. ನೀಡಲಿರುವ ದೇಶದ ಏಕೈಕ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ್ದು ಎಂಬುದನ್ನು ಹೆಮ್ಮೆಯಿಂದ ತೋರಿಸಿದ್ದೇವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಜಿಡಿಪಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದೆ. ಸುಮಾರು 23 ಸಾರ್ವಜನಿಕ ಉದ್ದಿಮೆಗಳು ದಿವಾಳಿ ಆಗಿವೆ. ಸರಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆ ನೆಲಕಚ್ಚಿದೆ. ಆದರೆ, ಖಾಸಗಿ ಜಿಯೋ ದೂರ ಸಂಪರ್ಕ ಸಂಸ್ಥೆ ಉನ್ನತ ಸ್ಥಾನಕ್ಕೇರಿದೆ ಎಂದು ಸಂತೋಷ್ ಲಾಡ್ ಹೇಳಿದರು.
ಬಳ್ಳಾರಿ ಸಂಸದ ಈ.ತುಕಾರಾಂ, ಶಾಸಕರಾದ ಎಚ್.ಆರ್.ಗವಿಯಪ್ಪ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿದರು. ಈ ವೇಳೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಝಿ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿ.ಪಂ.ಸಿಇಒ ನೊಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ, ಎಸ್ಪಿ ಶ್ರೀಹರಿಬಾಬು, ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.