ಸ್ನೇಹಕ್ಕೆ ಬೆಲೆ ಕೊಡುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ: ನಾಗರಾಜ್ ಹವಾಲ್ದಾರ್

ವಿಜಯನಗರ: ಜೀವನದಲ್ಲಿ ಸ್ನೇಹಕ್ಕೆ ಬೆಲೆ ಕೊಡುವವರು ಯಶಸ್ಸು ಸಾಧಿಸುತ್ತಾರೆ. ವ್ಯಕ್ತಿ ಕುಗ್ಗಿದ ಸಂದರ್ಭದಲ್ಲಿ ಧೈರ್ಯ ತುಂಬುವ ಒಂದು ಮಾತು ಕೂಡ ನರನಾಡಿಯಲ್ಲಿ ಚೈತನ್ಯ ತುಂಬಬಲ್ಲದು ಎಂದು ವಿಜಯನಗರ ಜಿಲ್ಲೆಯ ಪಿಯು ಶಿಕ್ಷಣ ಇಲಾಖೆಯ ನೂಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಹೇಳಿದರು.
ಹೊಸಪೇಟೆ ನಗರದ ಸಪಪೂ ಕಾಲೇಜು, ಚಿತ್ತವಾಡ್ಗಿಯ 2014-15ನೇ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನವನ್ನು ಅತಿಯಾಗಿ ಗಂಭೀರವಾಗಿ ಪರಿಗಣಿಸಬಾರದು. ಎದುರಾಗುವ ಸನ್ನಿವೇಶಗಳನ್ನು ಈಜಿಯಾಗಿ ಸ್ವೀಕರಿಸಿ, ನಗುತ್ತಲೇ ಜೀವನವನ್ನು ಮುನ್ನಡೆಸಬೇಕು. ಹೀಗೆ ಜೀವನವನ್ನು ಸರಳವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.
ಹೊಸಪೇಟೆಯ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಹಲವು ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಾಂಶುಪಾಲರಾದ ಹನುಮಂತಪ್ಪ, ಜಹೀರುದ್ದೀನ್, ಪುರುಷೋತ್ತಮ್ ಹಾಗೂ ಸಿಕಂದರ್ ಸರ್ ಅವರು ಪಿಯು ಶಿಕ್ಷಣ ಕ್ಷೇತ್ರದ ಪಿಲ್ಲರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಉಪನ್ಯಾಸಕರು ಗಟ್ಟಿಯಾದ ಶೈಕ್ಷಣಿಕ ಅಡಿಪಾಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಶಿಕ್ಷಕರು ನೀಡಿದ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಇದೇ ವೇಳೆ ಹಲವು ಶಿಕ್ಷಕರು ಇಂದಿಗೂ ತಮ್ಮ ವಿದ್ಯಾರ್ಥಿಗಳ ನರನಾಡಿಯಲ್ಲಿ ನೆಲೆಸಿದ್ದಾರೆ. ಗುರುವಿನ ಮಾರ್ಗದರ್ಶನ ಹಾಗೂ ಸ್ನೇಹಿತರ ಆತ್ಮೀಯತೆ ಜೀವನದ ಯಶಸ್ಸಿಗೆ ದೊಡ್ಡ ಶಕ್ತಿಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಸಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿಕಂದರ್, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಒಕ್ಕಲಕುಂಟದ ನಿವೃತ್ತ ಪ್ರಾಚಾರ್ಯ ಜೀಲಾನ್, ಬೆಳ್ತಂಗಡಿ ಸಪಪೂ ಕಾಲೇಜಿನ ಉಪನ್ಯಾಸಕ ಶೀನಾ ನಾಡೋಳಿ, ಗಾದಿಗನೂರು ಸಪಪೂ ಕಾಲೇಜಿನ ಪ್ರಾಚಾರ್ಯೆ ರಮಾ, ನಿವೃತ್ತ ಉಪನ್ಯಾಸಕಿ ಪ್ರಭಾವತಿ, ಮಂಜುಳಾ, ಥಿಯಾಸಾಫಿಕಲ್ ಕಾಲೇಜಿನ ಉಪನ್ಯಾಸಕಿ ಮಾಧುರಿ ಸೇರಿದಂತೆ ಅಂದಿನ ಅತಿಥಿ ಉಪನ್ಯಾಸಕರಾದ ಜೀಲಾನ್, ನಾಗರಾಜ್, ಶೃತಿ, ಸುರೇಶ್ ಚೌವ್ಹಾಣ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭುವನೇಶ್ವರಿ ಹಾಗೂ ಸಕ್ಲೈನ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಹಳೆಯ ವಿದ್ಯಾರ್ಥಿಗಳು ಹಾಗೂ ಗುರುಗಳು ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸ್ನೇಹ ಹಾಗೂ ಗುರುವಂದನೆಯ ಸಂಭ್ರಮದಲ್ಲಿ ಭಾಗಿಯಾದರು.
ಹೊಸಪೇಟೆಯ ಚಿತ್ತವಾಡ್ಗಿಯ ಸರ್ಕಾರಿ ಪಪೂ ಕಾಲೇಜ್ ನ 2014-15 ನೇ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನಾ ಮತ್ತು ಸ್ನೇಹ ಸಮ್ಮೀಲನ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಪಿಯು ಶಿಕ್ಷಣ ಇಲಾಖೆಯ ನೂಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.






