ಕಲ್ಯಾಣ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ 12,900 ಕೋಟಿ ರೂ.ಅನುದಾನ: ಕೇಂದ್ರ ಸಚಿವ ವಿ.ಸೋಮಣ್ಣ

ವಿಜಯನಗರ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಸಂದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರಕಾರ ಬರೋಬ್ಬರಿ 12,900 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ರವಿವಾರ ಹಗರಿಬೊಮ್ಮನಹಳ್ಳಿಯಲ್ಲಿ ಲೆವೆಲ್ ಕ್ರಾಸಿಂಗ್ 35ರ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಈ ಭಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಹಿಂದೆ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ 882 ಕೋಟಿ ರೂ. ಅನುದಾನ ಬರುತ್ತಿತ್ತು. ಆದರೆ ಮೋದಿ ಸರಕಾರ ಬಂದ ನಂತರ ವಾರ್ಷಿಕವಾಗಿ 7,500 ರಿಂದ 8,000 ಕೋಟಿ ರೂ.ಅನುದಾನ ನೀಡಲಾಗುತ್ತಿದೆ ಎಂದು ಸೋಮಣ್ಣ ಅಂಕಿಅಂಶ ಸಹಿತ ವಿವರಿಸಿದರು.
ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ 2025ರ ಜೂನ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 3,400 ಕೋಟಿ ರೂ. ವೆಚ್ಚದ ಈ ಯೋಜನೆಯು ಈ ಭಾಗದ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ತಿಳಿಸಿದರು.
ಹಗರಿಬೊಮ್ಮನಹಳ್ಳಿಯ ಎಲ್.ಸಿ 35ರ ಬದಲಿಗೆ ಗುಂಡಾ ರೋಡ್-ಕೊಟ್ಟೂರು ನಡುವೆ 38.7 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್.ಸಿ 37 ಮತ್ತು 38ರ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಹೊಸಪೇಟೆ ಟಿ.ಬಿ ಡ್ಯಾಂ ಬಳಿ ಬಸ್‌ಗಳು ನಿಲ್ಲಲು ಕಷ್ಟವಾಗುತ್ತಿದ್ದು, ಅಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸಪೇಟೆ-ಹಂಪಿ ರಸ್ತೆಯ (ಎಲ್.ಸಿ 85) ಕಾಮಗಾರಿಗೆ 26 ಕೋಟಿ ರೂ. ಮಂಜೂರಾಗಿದ್ದು, ಜೂನ್ ಒಳಗಾಗಿ ಪೂರ್ಣಗೊಳ್ಳಲಿದೆ. ಹೊಸಪೇಟೆ ರೈಲ್ವೆ ನಿಲ್ದಾಣವನ್ನು 15.17 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸೋಮಣ್ಣ ಹೇಳಿದರು.
ಹಂಪಾಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಸಂಪರ್ಕಕ್ಕೆ ಅಗತ್ಯವಿರುವ 1 ಎಕರೆ 41 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ವಿಳಂಬ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ವೇದಿಕೆಯಲ್ಲೇ ಸೂಚನೆ ನೀಡಿದರು. ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಸಂಸದರಾದ ಈ.ತುಕಾರಾಂ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಗಣಿಗಾರಿಕೆ ನಡೆಯುತ್ತಿದೆ ಮತ್ತು ಹಲವು ಕಾರ್ಖಾನೆಗಳಿವೆ. ಜೊತೆಗೆ ಪ್ರವಾಸೋದ್ಯಮದಲ್ಲಿ ಅವಳಿ ಜಿಲ್ಲೆ ಮುಂಚೂಣಿಯಲ್ಲಿದ್ದು ರೈಲ್ವೆ ಡಬ್ಲಿಂಗ್ ಸೇರಿದಂತೆ ವಿದ್ಯುದ್ದೀಕರಣ, ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ನೇಮಿರಾಜ್ ನಾಯಕ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಪೊಲೀಸ್ ಅಧೀಕ್ಷಕಿ ಎಸ್.ಜಹ್ನಾವಿ, ಮಾಜಿ ಶಾಸಕರಾದ ಚಂದ್ರಾ ನಾಯ್ಕ್, ಸ್ವಾಮೀಜಿಗಳಾದ ಮರಿಯಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಡಾ: ಮಹೇಶ್ವರ ಸ್ವಾಮೀಜಿ, ಹೆಚ್.ಬಿ.ಹಳ್ಳಿ ಹಾಲ್ ಸಿದ್ದೇಶ್ವರ ಸ್ವಾಮೀಜಿ, ರೈಲ್ವೆ ಇಲಾಖೆಯ ಸಿಇಓ ಅಜೆಯಶರ್ಮ, ಎಡಿಆರ್ ಎಂ ವಿಷ್ಣುಭೂಷಣ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







