ವಿಜಯನಗರ | ತಾಯಿ, ಶಿಶು ಮರಣದಲ್ಲಿ ವೈದ್ಯರ ನಿರ್ಲಕ್ಷತನ ಕಂಡು ಬಂದರೆ ಶಿಸ್ತು ಕ್ರಮ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತಾಯಿ, ಶಿಶು ಮತ್ತು ಮಕ್ಕಳ ಮರಣದಲ್ಲಿ ವೈದ್ಯರ ನಿರ್ಲಕ್ಷತನ ಬಗ್ಗೆ ವರದಿಯಾದರೆ ಅಂತಹ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡಿಟಿಎಫ್‌ಐ, ದಡಾರ ಮತ್ತು ರುಬೇಲ್ಲಾ ನಿರ್ಮೂಲನ ಕಾರ್ಯಕ್ರಮದಲ್ಲಿ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸೋಮವಾರ ಮಾತನಾಡಿದರು.
ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ವೇಳೆಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ರೀತಿಯಿಂದ ನಿರ್ಲಕ್ಷತನ ತೋರದೆ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕು. ಒಂದೊಂದು ಜೀವವು ಅಮೂಲ್ಯವಾದ್ದು, ರೋಗಿಗಳ ಬಗ್ಗೆ ವೈದ್ಯರು ವಿಶೇಷ ಕಾಳಜಿ ವಹಿಸಬೇಕಿದೆ. ಗರ್ಭಿಣಿ ಮತ್ತು ಬಾಣಂತಿಯರ ಸರಿಯಾದ ಸಮಯಕ್ಕೆ ತಪಾಸಣೆ ಮಾಡಿಸಬೇಕು ಹಾಗೂ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವನೆ ಶಿಫಾರಸು ಮಾಡಬೇಕು. ಆಯುಷ್ ಕೇಂದ್ರದಲ್ಲಿ ನಿಯಮಿತವಾಗಿ ಗರ್ಭಿಣಿಯರು ತಪಾಸಣೆ ಮತ್ತು ಲಸಿಕೆ, ಕಾಲ್ಸಿಯಂ ಮತ್ತು ಕಬ್ಬಿಣ ಅಂಶಯುಕ್ತ ಮಾತ್ರೆಗಳನ್ನು ನೀಡಬೇಕು ಎಂದರು.
ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರು ಚಿಕಿತ್ಸೆಗೆ ಬಂದಾಗ ಕಡ್ಡಾಯವಾಗಿ ಇಸಿಜಿ ಪರೀಕ್ಷೆಯನ್ನು ಮಾಡಬೇಕು. ರುಬೆಲ್ಲಾ ರೋಗವು ಗರ್ಭಿಣಿಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಗ್ಲೂಕೋಮ, ಕಣ್ಣಿನ ಪೊರೆ, ಕಿವುಡುತನ, ಮೆದಳು ಜ್ವರ, ಮಾನಸಿಕ ಆಸ್ವಸ್ಥತೆ, ಬುದ್ಧಿ ಮಾಂದ್ಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇದರ ಬಗ್ಗೆ ವಿಶೇಷ ಗಮನ ಹರಿಸಿ ವೈದ್ಯರು ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು ಎMದು ತಿಳಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ಎಲ್.ಆರ್., ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ವೈದ್ಯಾಧಿಕಾರಿಗಳಾದ ಡಾ.ಹರಿಪ್ರಸಾದ್, ಡಾ.ಭಾಸ್ಕರ್, ಡಾ.ಷಣ್ಮುಖ ನಾಯ್ಕ, ಡಾ.ಸೋಮಶೇಖರ, ಡಾ.ಧರ್ಮನಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಭದ್ರ, ಸೇರಿದಂತೆ ವಿವಿಧ ತಾಲೂಕಿನ ತಾಲೂಕು ಆರೋಗ್ಯ ಅಧಿಕಾರಿಗಳು, ವೈದ್ಯರು ಭಾಗವಹಿಸಿದ್ದರು.