ವಿಜಯನಗರ | ಹಂಪಿ ಕನ್ನಡ ವಿವಿಯಲ್ಲಿ ಕಂಬಾರರ 89ನೇ ಜನ್ಮದಿನೋತ್ಸವ

ವಿಜಯನಗರ : ಹಿರಿಯರು ಬಿಟ್ಟು ಹೋದ ಸಂಪ್ರದಾಯಗಳನ್ನು ಇಂದಿನ ಬದುಕಿನ ನಡವಳಿಕೆಗೆ ಪೂರಕವಾಗಿ ಕೊಂಡೊಯ್ಯುವಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಬರಹಗಳು ಯಶಸ್ವಿಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ 89ನೇ ಜನ್ಮದಿನದ ಪ್ರಯುಕ್ತ ಗುರುವಾರ (ಜ. 8) ಹಮ್ಮಿಕೊಳ್ಳಲಾಗಿದ್ದ ಅವರ ಪ್ರಸಿದ್ಧ ಕೃತಿ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳುವವನೇ ಭೂಮಿಯ ಒಡೆಯ ಎಂಬ ಸಾಮಾಜಿಕ ಕಳಕಳಿಯೊಂದಿಗೆ, ಕಂಬಾರರು ಈ ನಾಟಕದಲ್ಲಿ ಹೆಣ್ಣಿನ ಭಾವನೆಗಳು ಹಾಗೂ ಮಾನವೀಯ ಸಂಬಂಧಗಳನ್ನು ಹಳ್ಳಿ ಸೊಗಡಿನ ಭಾಷೆಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಕುವೆಂಪು ಹಾಗೂ ಗಿರೀಶ್ ಕಾರ್ನಾಡ್ ಅವರ ಸಾಹಿತ್ಯದಲ್ಲಿ ಕಂಡುಬರುವ ಹೆಣ್ಣಿನ ಆಸೆ-ಆಕಾಂಕ್ಷೆಗಳ ಸೆಳೆತವನ್ನು ಈ ನಾಟಕವೂ ಮನೋಜ್ಞವಾಗಿ ಕಟ್ಟಿಕೊಟ್ಟಿದೆ ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ನಾಟಕದಲ್ಲಿ ಸಣ್ಣ-ದೊಡ್ಡ ಪಾತ್ರಗಳೆಂಬ ಭೇದವಿಲ್ಲ; ಪ್ರತಿಯೊಂದು ಪಾತ್ರವೂ ತನ್ನ ಜೀವಂತಿಕೆಯಿಂದ ಸಂದೇಶವನ್ನು ತಲುಪಿಸಬೇಕು. ಹಂಪಿಯ ವಿದ್ಯಾರ್ಥಿಗಳು ಈ ನಾಟಕವನ್ನು ಅದ್ದೂರಿಯಾಗಿ ಪ್ರದರ್ಶಿಸುವ ಮೂಲಕ ವಿಶ್ವವಿದ್ಯಾಲಯದ ಗೌರವ ಹೆಚ್ಚಿಸಿದ್ದಾರೆ. ಇಂತಹ ಪ್ರದರ್ಶನಗಳು ರಾಜ್ಯದ ವಿವಿಧೆಡೆ ನಡೆಯಬೇಕು ಎಂದು ಹಾರೈಸಿದರು.
ಹಿರಿಯ ರಂಗಕರ್ಮಿ ಸಿ.ಟಿ. ಬ್ರಹ್ಮಾಚಾರ್ ಅವರ ನಿರ್ದೇಶನ ಹಾಗೂ ಡಾ. ವೀರೇಶ ಬಡಿಗೇರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು. ಜಯರಾಮ ಕೆ.ಹೆಚ್. ಅವರ ರಾಗ ಸಂಯೋಜನೆ ಹಾಗೂ ಸಂಗೀತ ವಿಭಾಗದ ವಿದ್ಯಾರ್ಥಿಗಳ ಹಿನ್ನೆಲೆ ಗಾಯನ ನಾಟಕಕ್ಕೆ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಶಿವಾನಂದ ವಿರಕ್ತಮಠ, ಡಾ. ಮಾಧವ ಪೆರಾಜೆ, ಡಾ. ವೀರೇಶ ಬಡಿಗೇರ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ರಂಗಾಸಕ್ತರು ಉಪಸ್ಥಿತರಿದ್ದರು.







