ವಿಜಯನಗರ | ಬಿಎಂಎಂ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್, ವಿಶ್ರಾಂತಿ ಕೊಠಡಿ ಲೋಕಾರ್ಪಣೆ

ವಿಜಯನಗರ : ಹೊಸಪೇಟೆ ನಗರದ ʼ60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆʼಗೆ ಬಿಎಂಎಂ ಸಂಸ್ಥೆ ವತಿಯಿಂದ ಸಿಎಸ್ಆರ್ ಯೋಜನೆ ಅಡಿಯಲ್ಲಿ ಅಂದಾಜು 4.5 ಐದು ಕೋಟಿ ವೆಚ್ಚದಲ್ಲಿ ಎರಡು ಐಸಿಯು ಆಂಬ್ಯುಲೆನ್ಸ್, ಎರಡು ವೈಕುಂಠ ರಥ ಆಂಬ್ಯುಲೆನ್ಸ್ ಕೊಡುಗೆ ಹಾಗೂ ಲಾಂಡ್ರಿ ಹಾಗೂ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಸದರಾದ ಈ ತುಕಾರಾಂ, ಶಾಸಕರಾದ ಹೆಚ್ ಆರ್ ಗವಿಯಪ್ಪ, ಬಿಎಂಎಂ ಸಂಸ್ಥೆಯ ಜನರಲ್ ಮ್ಯಾನೇಜರ್ ಗಣೇಶ್ ಹೆಗಡೆ ನೇತೃತ್ವದಲ್ಲಿ ಆಂಬ್ಯಲೆನ್ಸ್ ಮತ್ತು ವಿಶ್ರಾಂತಿ ಕೊಠಡಿಯ ಲೋಕಾರ್ಪಣೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕರಾದ ಹೆಚ್.ಆರ್.ಗವಿಯಪ್ಪ, ಸಾಮಾಜಿಕ ಹೊಣೆಗಾರಿಕೆ ಕಾರ್ಯ ನೀತಿ ಅಡಿಯಲ್ಲಿ (CSR ) ಬಿ.ಎಂ.ಎಂ. ಕಂಪೆನಿಯಿಂದ ತುರ್ತುಸೇವೆಗಾಗಿ ಎರಡು ಆಂಬ್ಯುಲೆನ್ಸ್ ವಾಹನಗಳು, ಎರಡು ವೈಕುಂಠ ವಾಹನಗಳು, ರೋಗಿಗಳ ಅನುಕೂಲಕ್ಕಾಗಿ ವಸತಿ ಕೊಠಡಿ ಸೇರಿದಂತೆ ಎಲ್ಲಾ ದಾನಗಳನ್ನು ನೀಡಿರುವ ಬಿಎಂಎಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಸದರಾದ ಈ ತುಕಾರಾಮ್ ಮಾತನಾಡಿ, ಜೆಎಸ್ ಡಬ್ಲ್ಯೂ ಸಂಸ್ಥೆ ಮತ್ತು ಬಿಎಂಎಂ ಸಂಸ್ಥೆ ಜನರಿಗೆ ನೀಡಿರುವ ಕೊಡುಗೆ ಶ್ಲಾಘನೀಯ. ಈ ಕೊಡುಗೆಯನ್ನು ಎಲ್ಲರೂ ಸದ್ಬಳಕೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ಎನ್ ಮುಹಮ್ಮದ್ ಇಮಾಮ ನಿಯಾಝ್, ಆಡಿಟರ್ ಮುಹಮ್ಮದ್, ಕಟಕಿ ಸಾದಿಕ್, ಮಾಜಿ ನಗರಸಭಾ ಸದಸ್ಯ ಮಂಜುನಾಥ್, ಮಾಜಿ ನಗರಸಭಾ ಅಧ್ಯಕ್ಷ ಗುಜ್ಜಲ್ ಲಿಂಗಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಂಕರ್ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಡಾ.ಹರಿಪ್ರಸಾದ್, ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







