ವಿಜಯನಗರ | ಬೆಳೆ ವಿಮೆ ಆಕ್ಷೇಪಣೆಗೆ ಅರ್ಜಿ ಅಹ್ವಾನ

ವಿಜಯನಗರ(ಹೊಸಪೇಟೆ) : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಬೆಳೆ ವಿಮೆಗೆ ನೋಂದಾಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಪ್ರಸ್ತಾವನೆಯನ್ನು ಬೆಳೆ ಸಮೀಕ್ಷೆಯಲ್ಲಿ ರೈತರ ಜಮೀನಿನಲ್ಲಿ ದಾಖಲಾದ ಛಾಯಾಚಿತ್ರದೊಂದಿಗೆ ಪರಿಶೀಲಿಸಿ ಸಂರಕ್ಷಣೆ ವೆಬ್ ಪೋರ್ಟಲ್ ನಲ್ಲಿ ಇತ್ಯರ್ಥಪಡಿಸಲಾಗಿದೆ.
2023-24 ನೇ ಸಾಲಿನ ಮುಂಗಾರು ಹಂಗಾಮಿನ 13 ಪ್ರಸ್ತಾವನೆಗಳು (ಕೃಷಿ ಬೆಳೆ-1, ತೋಟಗಾರಿಕೆ ಬೆಳೆ-12) ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ವಿಮಾ ಕಂಪನಿಯವರು ತಿರಸ್ಕೃತಗೊಳಿಸಿರುತ್ತಾರೆ. ಅಂತಹ ತಿರಸ್ಕೃತಗೊಂಡ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಸಹಾಯಕ ಹೊಸಪೇಟೆ ಕೃಷಿ ನಿರ್ದೇಶಕರ ಕಚೇರಿ, ಹೊಸಪೇಟೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಕಸಬಾ, ಕಮಲಾಪುರ ಹಾಗೂ ಮರಿಯಮ್ಮನಹಳ್ಳಿ ಮತ್ತು ಸಂಬಂಧಪಟ್ಟ ಗ್ರಾಪಂ ಕಚೇರಿಗಳಲ್ಲಿ ಪ್ರಕಟಿಸಲಾಗಿರುತ್ತದೆ.
ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ ರೈತರು ಮೇ 3 ರಿಂದ 17ರೊಳಗೆ ಮರುಪರಿಶೀಲಿಸಲು ಅರ್ಜಿಯೊಂದಿಗೆ ನೊಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು 2023-24 ರ ಪಹಣಿಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರುವ ದಾಖಲೆ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಶೀದಿ, ವಿಮೆಗೆ ನೊಂದಾಯಿಸಿದ ಬೆಳೆ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿರುವ ರಶೀದಿಯೊಂದಿಗೆ ಸಲ್ಲಿಸಬೇಕೆಂದು ಹೊಸಪೇಟೆ ಸಹಾಯಕ ನಿರ್ದೇಶಕರಾದ ಎಸ್.ಮನೋಹರ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







