ವಿಜಯನಗರ | ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕತ್ವ, ಸಮಾಜ ಸೇವಾ ಕೌಶಲ್ಯಗಳನ್ನು ಬೆಳೆಸುತ್ತದೆ : ಪಿ.ಜಿ.ಆರ್. ಸಿಂಧ್ಯಾ

ವಿಜಯನಗರ(ಹೊಸಪೇಟೆ): ನಗರ ಮಹಿಳಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರು ಮಾತನಾಡಿದರು.
ಸಂಸ್ಥೆ ಸ್ವಯಂಪ್ರೇರಿತ, ರಾಜಕೀಯೇತರ ಮತ್ತು ಜಾತ್ಯಾತೀತವಾಗಿದ್ದು, ಕ್ಯಾಂಪಿಂಗ್, ಹೈಕಿಂಗ್ ಮತ್ತು ಸಮಾಜ ಸೇವಾ ಚಟುವಟಿಕೆಗಳ ಮೂಲಕ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಪಘಾತ ಸಂಭವಿಸಿದಾಗ ಪ್ರಥಮ ಚಿಕಿತ್ಸೆಯನ್ನು ನೀಡುವುದು, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು, ಸಮಾಜ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಯುವಕರನ್ನು ತೊಡಗಿಸುವುದು ಇದರ ಮುಖ್ಯ ಉದ್ದೇಶಗಳು ಎಂದು ಸಿಂಧ್ಯಾ ತಿಳಿಸಿದ್ದಾರೆ.
ಕಾಲೇಜು ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಲು ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕು ಹಾಗೂ ಕೊರೋನಾ ಹಾವಳಿಯ ಸಮಯದಲ್ಲಿ ವಿದ್ಯಾರ್ಥಿಗಳು ಒಂದು ಕೋಟಿ ಮಾಸ್ಕ್ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ ಸಾಧನೆ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೂರು ಅಂಗವಿಕಲ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗುತ್ತಿದೆ. ಸಂಸ್ಥೆ ಹೊಸ ತಂತ್ರಜ್ಞಾನ ಬಳಸಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಮುಂದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಐ ಕಚೇರಿ ವಿಷಯ ಪರಿವೀಕ್ಷಕ ಬಸವಂತಯ್ಯ, ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಹರಪನಹಳ್ಳಿ ತಾಲ್ಲೂಕು ದೈಹಿಕ ನಿರೀಕ್ಷಕ ಷಣ್ಮುಖಪ್ಪ, ಹರಪನಹಳ್ಳಿ ಕ್ಷೇತ್ರ ಸಮನ್ವಯ ಅಧಿಕಾರಿ ಶಿವಕುಮಾರ್ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.







