ವಿಜಯನಗರ: ನವಜಾತ ಅವಳಿ ಶಿಶುಗಳ ಮೃತ್ಯು ಪ್ರಕರಣ; ಬಾಣಂತಿ, ಕುಟುಂಬಸ್ಥರನ್ನು ಭೇಟಿಯಾದ ಅಧಿಕಾರಿಗಳು

ಹೊಸಪೇಟೆ : ಅವಳಿ ನವಜಾತ ಶಿಶುಗಳು ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳು ಬಾಣಂತಿ ಹಾಗೂ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ, ತಾಲೂಕು ದಂಡಾಧಿಕಾರಿ ಶ್ರುತಿ ಅವರು ಬಾಣಂತಿ ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಂಕರ್ ನಾಯಕ್ ರವರಿಗೆ ಸಂಪೂರ್ಣ ಮಾಹಿತಿಯೊಂದಿಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ವೈದ್ಯರ ನಿರ್ಲಕ್ಷ್ಯ ಸಾಬೀತಾದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು, ಇನ್ನು ಮುಂದೆ ಈತರಹ ಅಹಿತಕರ ಘಟನೆ ನಡೆದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಸಹಾಯಕ ಅಲಿ ಅವರು ಇದ್ದರು.





