ವಿಜಯನಗರ | ನ್ಯಾನೋ ಯೂರಿಯಾ ರಸಗೊಬ್ಬರ ಬಳಕೆಗೆ ರೈತರು ಮುಂದಾಗಲಿ : ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್

ವಿಜಯನಗರ(ಹೊಸಪೇಟೆ) : ನ್ಯಾನೋ ರಸಗೊಬ್ಬರ ಬಳಕೆಯಿಂದ ಪೋಷಕಾಂಶದ ಸದ್ಭಳಕೆಯಾಗುತ್ತದೆ ಹಾಗೂ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಹೊಸಪೇಟೆಯ ತಾಲೂಕಿನ ಹೊಸೂರು ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.
ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ಪೋಷಕಾಂಶಗಳ ಪೋಲಾಗುವಿಕೆ ಕಡಿಮೆಯಾಗುತ್ತದೆ ಹಾಗೂ ಸಾಮಾನ್ಯ ರಸಗೊಬ್ಬರ ಬಳಕೆಯಿಂದಾಗುವ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಇದನ್ನು ಸುಲಭವಾಗಿ ಶೇಖರಣೆ ಮತ್ತು ಸಾಗಾಣಿಕೆ ಮಾಡಬಹುದಾಗಿದೆ. ನ್ಯಾನೋ ರಸಗೊಬ್ಬರದಿಂದ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದಾಗಿದೆ. ರಸಗೊಬ್ಬರಗಳು ಚಿಕ್ಕಗಾತ್ರದ ಕಣಗಳನ್ನು ಹೊಂದಿರುವುದರಿಂದ ಬೆಳೆಗೆ ಶೇ.80 ರಷ್ಟು ಪರಿಣಾಮ ಬೀರುತ್ತದೆ. ಗಿಡಕ್ಕೆ ಬೇಕಾಗಿರುವ ಸಾರಜನಕ ಮತ್ತು ರಂಜಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಬೆಳೆ ಹಾಗೂ ಬೇರಿನ ಬೆಳೆವಣಿಗೆ ಸಹಯವಾಗಿದೆ. ಇದನ್ನು ಬಳಕೆ ಮಾಡುವುದರಿಂದ ಬೆಳೆಗಳ ಉತ್ಪಾದಕೆತೆ ಹೆಚ್ಚಾಗಿ ಬೆಳೆಗೆ ತಗಲುವ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಉತ್ತಮ ಆದಾಯಕ್ಕೆ ಸಹಕಾರಿಯಾಗಿದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ ಮಂಜುನಾಥ ಮಾತನಾಡಿದರು.
ಈ ವೇಳೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ, ಕೃಷಿ ಇಲಾಖೆ ಉಪನಿರ್ದೇಶಕ ಕೆ.ನಯೀಮ್ ಪಾಷಾ, ಸಹಾಯಕ ಕೃಷಿ ನಿರ್ದೇಶಕ ಎಸ್.ಮನೋಹರ ಗೌಡ, ಇಫ್ಕೊ ಸಂಸ್ಥೆಯ ಕ್ಷೇತ್ರ ವ್ಯವಸ್ಥಾಪಕ ಜಿ.ಗೋವಿಂದರಾಜು ಸೇರಿದಂತೆ ಸ್ಥಳೀಯ ರೈತರು ಹಾಗೂ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಟಿ. ನಾಗರಾಜ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.





