ವಿಜಯನಗರ | ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ವಿಜಯನಗರ/ಹೊಸಪೇಟೆ : ನಗರದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ, ಸಂಭ್ರಮ ಮತ್ತು ಸಹೋದರತೆಯ ವಾತಾವರಣದಲ್ಲಿ ಆಚರಿಸಿದರು.
ಒಂದು ತಿಂಗಳ ಉಪವಾಸ ಪೂರ್ಣಗೊಳಿಸಿದ ನಂತರ ಚಂದ್ರದರ್ಶನದೊಂದಿಗೆ ಮಸೀದಿಗಳಲ್ಲಿ ಹಾಗೂ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ನಮಾಝ್ ಸಲ್ಲಿಸಿ, ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಿದರು.
ನಗರದ ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂಧವರು ಅಂಬೇಡ್ಕರ್ ಸರ್ಕಲ್ ಸಮೀಪದ ಈದ್ಗಾ ಮೈದಾನದಲ್ಲಿ ಕೂಡಿಕೊಂಡು, ಝಕಾತ್ (ದಾನ) ನೀಡುವ ಮೂಲಕ ಧಾರ್ಮಿಕ ಆಚರಣೆಗಳಲ್ಲಿ ತೊಡಗಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಪರಸ್ಪರ ಅಲಿಂಗಿಸಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂತಸ ಹಂಚಿಕೊಂಡರು.
ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಎಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಅವರು ಮಾತನಾಡಿದರು.
ನಗರದ ಆರ್.ಟಿ.ಓ. ಕಚೇರಿ ಹಿಂಭಾಗದ ಈದ್ಗಾ ಮೈದಾನ, ಬಸ್ ಡಿಪೋ ಸಮೀಪದ ಮೈದಾನ, ಗುಲಾಬ್ ಷಾ ವಲಿ ದರ್ಗಾ ಈದ್ಗಾ, ಚಿತ್ತವಾಡ್ಗಿ, ಕಾರಿಗನೂರು, ನಾಗೇನಹಳ್ಳಿ ಹಾಗೂ ಟಿ.ಬಿ. ಡ್ಯಾಮ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಹ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನಾ ಕಾರ್ಯಕ್ರಮದಲ್ಲಿ ಅಂಜುಮನ್ ಸಮಿತಿಯ ಉಪಾಧ್ಯಕ್ಷ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಅನ್ಸರ್ ಭಾಷಾ, ಜಂಟಿ ಕಾರ್ಯದರ್ಶಿ ಡಾ. ದುರ್ವೇಶ್ ಮೈನುದ್ದೀನ್ ಸೇರಿದಂತೆ ಸಮಿತಿಯ ಸದಸ್ಯರು, ಸಮಾಜದ ಮುಖಂಡರು ಹಾಗೂ ಸಾವಿರಾರು ಮಂದಿ ಭಾಗವಹಿಸಿದ್ದರು.






