ವಿಜಯನಗರ | ವಿಮೆ ಹಣ ಲೂಟಿಗೆ ಸಂಚು ರೂಪಿಸಿ ಅಮಾಯಕನ ಕೊಲೆ: ಆರು ಆರೋಪಿಗಳ ಸೆರೆ

ಗಂಗಾಧರ
ವಿಜಯನಗರ: ಅಮಾಯಕ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 5.25 ಕೋಟಿ ರೂ. ಮೊತ್ತದ ಅಪಘಾತ ವಿಮೆ ಮತ್ತು ಇತರ ವಿಮೆ ಪಾಲಿಸಿಗಳನ್ನು ಮಾಡಿಸಿ, ವಿಮೆ ಮೊತ್ತ ಪಡೆಯುವ ದುರುದ್ದೇಶದಿಂದ ಆತನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿರುವ ಬೆಚ್ಚಿ ಬೀಳಿಸುವ ಪ್ರಕರಣವೊಂದು ವಿಜಯನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೌಲ್ ಪೇಟೆ ನಿವಾಸಿ ಕೆ.ಗಂಗಾಧರ ಕೊಲೆಯಾದವರು. ರಿಯಾಝ್, ರಿವಿ ಯಾನೆ ರವಿ ಗೋಸಂಗಿ, ಅಜೇಯ್ ಯಾನೆ ಅಡ್ಡಿ, ಕೃಷ್ಣಪ್ಪ, ಆರ್.ವೈ ಯೋಗರಾಜ್ ಸಿಂಗ್ ಮತ್ತು ಹುಲಿಗೆಮ್ಮ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ನಗರದ ಕೌಲ್ಪೇಟೆ ನಿವಾಸಿ ಕೆ.ಗಂಗಾಧರ ಅವರ ಮೃತದೇಹ ಸೆ.28ರಂದು ಎಚ್.ಎಲ್.ಸಿ. ಕಾಲುವೆ ಬಳಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಗಂಗಾಧರ್ ರ ಪತ್ನಿ ಕೆ.ಶಾರದಮ್ಮ ಪಟ್ಟಣದ ಠಾಣೆಗೆ ದೂರು ನೀಡಿದ್ದರು. ತನ್ನ ಪತಿಗೆ ಸ್ಟ್ರೋಕ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿದ್ದು, ಅವರಿಗೆ ದ್ವಿಚಕ್ರ ವಾಹನ ಚಲಾಯಿಸಲು ಬರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಗೆ ಮೂರು ತಂಡಗಳನ್ನು ರಚಿಸಿದ್ದರು. ತನಿಖೆ ನಡೆಸಿದ ಪೊಲೀಸರು ಹಣದ ಆಮಿಷಕ್ಕೆ ಒಳಗಾಗಿ ಅಮಾಯಕನನ್ನು ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಜಾಲದ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಗಂಗಾಧರ್ ತೀವ್ರ ಅನಾರೋಗ್ಯ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಅನಾರೋಗ್ಯದ ಲಾಭ ಪಡೆಯಲು ಆರೋಪಿಗಳು ಸಂಚು ರೂಪಿಸಿದ್ದರು. ಗಂಗಾಧರರಿಗೆ ವಿವಾಹವಾಗಿದ್ದರೂ ನಗರದ ಹೋಟೇಲ್ ವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಮಹಿಳೆ ಹುಲಿಗೆಮ್ಮಳಿಗೆ 3 ಲಕ್ಷ ರೂ. ನೀಡಿ ಗಂಗಾಧರ ಅವರ ಪತ್ನಿ ಎಂದು ನಮೂದಿಸಿ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ಅಲ್ಲದೇ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೃತ ಗಂಗಾಧರನ ಹೆಸರಿನಲ್ಲಿ ಬ್ಯಾಂಕ್ ಖಾತೆ ಕೂಡಾ ತೆರೆದಿದ್ದರು. ಬಳಿಕ ಪಾನ್ ಕಾರ್ಡ್ ಮಾಡಿಸಿ, ಆದಾಯ ತೆರಿಗೆ ಪಾವತಿಸಿದ್ದರು. ಗಂಗಾಧರ ಹೆಸರಿನಲ್ಲಿ ವಿವಿಧ ಇನ್ಸೂರೆನ್ಸ್ ಕಂಪೆನಿಗಳಲ್ಲಿ 5.25 ಕೋಟಿ ರೂ. ಮೊತ್ತದ ಅಪಘಾತ ವಿಮೆ, ಇತರ ವಿಮೆಯ ಆರು ಪಾಲಿಸಿಗಳನ್ನು ಮಾಡಿಸಿದ್ದರು. ತಾವೇ ಪ್ರೀಮಿಯಂ ಹಣ ತುಂಬಿ, ಆ ಇನ್ಸೂರೆನ್ಸ್ ಗಳಿಗೆ ನಕಲಿ ನಾಮಿನಿ ರಿಜಿಸ್ಟರ್ ಮಾಡಿಸಿ, ಬ್ಯಾಂಕ್ ಖಾತೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು.
ಈ ಮಧ್ಯೆ ಗಂಗಾಧರ ಅನಾರೋಗ್ಯದಿಂದ ಮೃತಪಟ್ಟರೆ ಬೇಗ ವಿಮೆ ಕ್ಲೈಮ್ ಮಾಡುವುದು ಸುಲಭವಲ್ಲ, ಕೆಲ ಪಾಲಿಸಿಗಳು ತಿರಸ್ಕೃತಗೊಳ್ಳುತ್ತವೆ ಎಂಬುದನ್ನು ಮನಗಂಡ ದುಷ್ಕರ್ಮಿಗಳು ಅಪಘಾತ ವಿಮೆ ಪಾಲಿಸಿಯ ಹಣವನ್ನು ಪಡೆಯಲು ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದರು. ಆದರೆ ಅನಾರೋಗ್ಯ ಕಾರಣ ಗಂಗಾಧರರಿಗೆ ದ್ವಿಚಕ್ರ ವಾಹನ ಚಲಾಯಿಸಲಾಗುತ್ತಿರಲಿಲ್ಲ ಎಂಬುದು ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದೆ.
ಪ್ರಕರಣ ಭೇದಿಸಿದ ಪೊಲೀಸ್ ತಂಡ







