ವಿಜಯನಗರ | ʼಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಮುಹಮ್ಮದ್ ಅಕ್ರಮ್ ಶಾ ಚಾಲನೆ

ವಿಜಯನಗರ (ಹೊಸಪೇಟೆ): ಸೆ.17ರಿಂದ ಅ.2ರವರೆಗೆ ನಡೆಯುವ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಶುಚಿತ್ವ ಮತ್ತು ನೈರ್ಮಲ್ಯತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಶಾ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಬುಧವಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಅಭಿಯಾನವನ್ನು ಸಾಂಕೇತಿಕವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಪ್ರೇರಣೆ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಕಸದ ರಾಶಿಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗುವುದು. ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ಸ್ವಚ್ಛತೆಗೆ ಶ್ರಮದಾನಗಳನ್ನು ಆಯೋಜಿಸಲಾಗುವುದು. ಸ್ವಚ್ಛತಾ ಕಾರ್ಯಕರ್ತರಿಗಾಗಿ ಆರೋಗ್ಯ ಶಿಬಿರಗಳು ಹಾಗೂ ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಪರಿಸರ ಸ್ನೇಹಿ, ತ್ಯಾಜ್ಯರಹಿತ ಹಬ್ಬಗಳ ಆಚರಣೆಗೆ ಪ್ರೋತ್ಸಾಹ ನೀಡಲಾಗುವುದು. ಜೊತೆಗೆ ‘ಸ್ವಚ್ಛ ಸುಜಲ’, ‘ಗ್ರಾಮ ಸಂಕಲ್ಪ’, ತ್ಯಾಜ್ಯದಿಂದ ಕಲಾಕೃತಿಗಳ ರಚನೆ, ಸ್ವಚ್ಛ ಬೀದಿ ಮತ್ತು ಸ್ವಚ್ಛ ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು” ಎಂದು ತಿಳಿಸಿದರು.
ಸೆಪ್ಟೆಂಬರ್ 25ರಂದು “ಒಂದು ದಿನ – ಒಂದು ಗಂಟೆ – ಎಲ್ಲರೂ ಶ್ರಮದಾನ” (Ek Din – Ek Ghanta – Ek Saath) ಘೋಷವಾಕ್ಯದಡಿ ಸಾರ್ವಜನಿಕ ಶ್ರಮದಾನವನ್ನು ಹಮ್ಮಿಕೊಳ್ಳಲಾಗುವುದಾಗಿ ಅವರು ಹೇಳಿದರು.
ಈ ಅಭಿಯಾನ ಯಶಸ್ವಿಯಾಗಲು ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಬಳಿಕ ಜಿಲ್ಲಾ ಪಂಚಾಯತ್ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ದೀಪಾ, ಜಲಜೀವನ ಮಿಷನ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸಿ.ಎಂ. ಮಹೇಶ್ವರಿ ಸೇರಿದಂತೆ ಜಿಲ್ಲಾ ಸಮಾಲೋಚಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.







