ವಿಜಯನಗರ | ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ : ಡಿಸಿ ಎಂ.ಎಸ್.ದಿವಾಕರ್

ವಿಜಯನಗರ (ಹೊಸಪೇಟೆ) : ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಂಡು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣ ಆಚರಣೆ ಅಧಿಕಾರಿಗಳು ಕಾಳಜಿ ವಹಿಸಬೇಕು. 9ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮತ್ತು ರಾಷ್ಟ್ರ ಗೀತೆಯ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು. ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಬೇಕು. ವಿವಿಧ ಶಾಲಾ ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಗೃಹರಕ್ಷಕಕರು, ಪೌರಕಾರ್ಮಿಕರು ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಪೊಲೀಸ್ ತಂಡಗಳೊಂದಿಗೆ ಆಕರ್ಷಕ ಪಥಸಂಚಲನಕ್ಕೆ ಸಿದ್ದತೆ ಕೈಗೊಳ್ಳಬೇಕು. ಅರ್ಥಪೂರ್ಣ ಆಯೋಜನೆಗೆ ಕಲ್ಯಾಣ ಕರ್ನಾಟಕ ರಚನೆಯಾದ ಪರಿಕಲ್ಪನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲು ಅಧಿಕಾರಿಗಳು ಪೂರ್ವಸಿದ್ದತೆ ಕೈಗೊಳ್ಳುವಂತೆ ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.





