ವಿಜಯನಗರ | ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕವಿಗೋಷ್ಠಿ

ವಿಜಯನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್ ವತಿಯಿಂದ ನಗರದ 100 ಹಾಸಿಗೆ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ವಿಶೇಷ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ. ಬಸವರಾಜ್ ಅವರು ಮಾತನಾಡಿ, ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಟ್ರಸ್ಟ್ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯವಾಗಿದ್ದು, ಕವಿಗೋಷ್ಠಿಯ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವು ಕವಿಗಳು ಹಾಗೂ ಕವಯತ್ರಿಯರು ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕವನಗಳನ್ನು ವಾಚಿಸಿ ಗಮನ ಸೆಳೆದರು.
ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ್ ಮಾತನಾಡಿ, ಪರಿಸರ ಉಳಿವಿನಲ್ಲಿ ಕವಿಗಳು ಮತ್ತು ಸಾಹಿತಿಗಳ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಗಿಡ-ಮರಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ಪ್ರತಿದಿನವೂ ಪರಿಸರ ರಕ್ಷಣೆಗೆ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. ಕುಮಾರಿ ಸೌಂದರ್ಯ ಪ್ರಾರ್ಥನೆ ನೆರವೇರಿಸಿದ್ದು, ಜಗದೀಶ್ ಬೆನ್ನೂರು ಕಾರ್ಯಕ್ರಮ ನಿರೂಪಿಸಿದರು. ಎ. ಗೋವಿಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾಗವಹಿಸಿದ್ದ ಕವಿಗಳು ಹಾಗೂ ಕವಯತ್ರಿಯರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜನೇಯಲು, ಸುಧಾ ವಿರೂಪಾಕ್ಷಗೌಡ, ಎಂ. ಉಮಾಮಹೇಶ್ವರ ಸೇರಿದಂತೆ ಹಲವಾರು ಗಣ್ಯರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






