ವಿಜಯನಗರ | ವೇತನ ಹೆಚ್ಚಳ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ

ವಿಜಯನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತರ ಫೆಡರೇಷನ್ ವತಿಯಿಂದ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಗಾಂಧೀಜಿ ಹುತಾತ್ಮರ ಸ್ಮಾರಕದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಯಿತು, ಕಳೆದ 25 ವರ್ಷಗಳಿಂದ ಅಲ್ಪ ಗೌರವಧನಕ್ಕೆ ದುಡಿಯುತ್ತಿರುವ ನೂರಾರು ಕಾರ್ಯಕರ್ತೆಯರು, ಪ್ರಸ್ತುತ ಬೆಲೆ ಏರಿಕೆಯ ನಡುವೆ ಜೀವನ ನಿರ್ವಹಣೆ ತೀವ್ರ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಚುನಾವಣೆಗೂ ಮುನ್ನ ಸರಕಾರ ನೀಡಿದ ಭರವಸೆಯಂತೆ ಮಾಸಿಕ ವೇತನವನ್ನು 18,000 ರೂ.ಗೆ ಹೆಚ್ಚಿಸಬೇಕು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಜಮಾ ಮಾಡಬೇಕು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಶಾಲೆಯ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯದೆ, ಬೇರೆ ಶಾಲೆಗಳಿಗೆ ನಿಯೋಜಿಸಬೇಕು ಹಾಗೂ ಪ್ರತಿ ತಿಂಗಳು ಸಕಾಲದಲ್ಲಿ ಆಹಾರ ಧಾನ್ಯಗಳನ್ನು ಪೂರೈಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಫೆಡರೇಷನ್ ತಾಲೂಕು ಅಧ್ಯಕ್ಷೆ ಜಿ.ಸುಜಾತ, ಪ್ರಧಾನ ಕಾರ್ಯದರ್ಶಿ ಜಿ. ಉಷಾರಾಣಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು.




