ವಿಜಯನಗರ | ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನಾಚರಣೆ

ವಿಜಯನಗರ : ಕೊಟ್ಟೂರು ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಸಮಿತಿ ವತಿಯಿಂದ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಆಚರಿಸಲಾಯಿತು.
ನವೆಂಬರ್ 18ರಂದು ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿವರ್ಷ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಆಚರಿಸಲಾಗುತ್ತಿದೆ.
ಈ ವೇಳೆ ಸಿಪಿಐ ಪಕ್ಷದ ರಾಜ್ಯ ಮಂಡಳಿ ತಾಲೂಕು ಕಾರ್ಯದರ್ಶಿ ಕೆ. ರೇಣುಕಮ್ಮ ಮಾತನಾಡಿ, ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ. ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು 75 ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ. ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿಗಳಾದ ಉಮೇಶ.ಎಚ್, ಬಿ.ರೇಣುಕಮ್ಮ, ತಾಲೂಕು ಮಂಡಳಿ ಸದಸ್ಯರಾದ ರಸೂಲ್, ಜಲೀಲ್, ಮುಖಂಡರಾದ ಷಂಶದ್, ಶಾಹಿನಾ, ಗೌರಮ್ಮ, ಜ್ಯೋತಿ, ಕಾಳಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.





