ವಿಜಯನಗರ | ಅಪೂರ್ಣ ಸಿಸಿ ರಸ್ತೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

ವಿಜಯನಗರ / ಕೊಟ್ಟೂರು: ಪಟ್ಟಣದ ಉಜ್ಜಿನಿ ರಸ್ತೆ ಜೋಳದಕೂಡ್ಲಿಗಿ ಕ್ರಾಸ್ ಬಳಿ ಸಿಸಿ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಗುರು ಕೊಟ್ಟೂರೇಶ್ವರ ಜಾತ್ರೆ ನಿಮಿತ್ತ ಕೊಟ್ಟೂರು ಪಟ್ಟಣದ ಹಲವಾರು ಹದಗೆಟ್ಟ ರಸ್ತೆಗಳಿಗೆ ಹೊಸ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಪಟ್ಟಣದಲ್ಲೇ ಅತೀ ಹೆಚ್ಚು ವಾಹನ ಸಂಚಾರ ಇರುವ ಉಜ್ಜಿನಿ ರಸ್ತೆಯ ಕಾಮಗಾರಿ ಮಾತ್ರ ಅಪೂರ್ಣವಾಗಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಡಾಂಬರೀಕರಣ ಕೆಲಸವನ್ನು ತುರ್ತುವಾಗಿ ಪೂರ್ಣಗೊಳಿಸಿದರೂ, ಸಿಸಿ ರಸ್ತೆ ನಿರ್ಮಾಣವನ್ನು ಸಂಪೂರ್ಣವಾಗಿ ಮಾಡದೇ ಒಂದು ಭಾಗವನ್ನು ಮಾತ್ರ ಪಥಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದ್ದು, ಮತ್ತೊಂದು ಭಾಗಕ್ಕೆ 8ಎಂಎಂ ಕಲ್ಲು ಹಾಕಿ ತಾತ್ಕಾಲಿಕವಾಗಿ ಬಿಟ್ಟಿರುವುದರಿಂದ ಜನರಿಗೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಥೋತ್ಸವದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ತುರ್ತಾಗಿ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ಹಣದ ಕೊರತೆಯಿಂದ ಕೆಲಸ ನಿಂತಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಅಪೂರ್ಣ ಕಾಮಗಾರಿಯ ಬಗ್ಗೆ ವಿಡಿಯೋಗಳು ಹರಿದಾಡುತ್ತಿದೆ.
ರಸ್ತೆ ಕಾಮಗಾರಿ ಕುರಿತು ರಾಜಕೀಯ ಮುಖಂಡರನ್ನು ಪ್ರಶ್ನಿಸಿದರೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದಿರುವ ಸಿಸಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.







