ವಿಜಯನಗರ : ಸೀಳು ತುಟಿ ಶಸ್ತ್ರಚಿಕಿತ್ಸೆ ಉಚಿತ ; ಡಿಹೆಚ್‌ಓ ಡಾ.ಲಿಂಗರಾಜು ಹೇಳಿಕೆ

ವಿಜಯನಗರ(ಹೊಸಪೇಟೆ): ಸೀಳು ತುಟಿ ಮತ್ತು ಅಂಗುಳ ಹಾಗೂ ಇತರ ಮುಖದ ಶಸ್ತ್ರಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿರುವುದು ಬಡ ವರ್ಗದ ಜನರಿಗೆ ತುಂಬಾ ಅನುಕೂಲವಾಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಹೇಳಿಕೆ ನೀಡಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡಾ. ಜಯಂತ್ ಫೌಂಡೇಶನ್ ಬೆಂಗಳೂರು, ಇವರ ಸಹಯೋಗದಲ್ಲಿ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಸೇವೆಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೀಳು ತುಟಿ, ಸೀಳು ಅಂಗುಳ ಮತ್ತು ಮುಖದ ವಿರೂಪಗಳ ಶಸ್ತ್ರ ಚಿಕಿತ್ಸೆಗಳ ಸೇವೆಗಳು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಇದಕ್ಕಾಗಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಸೀಳು ತುಟಿ ಮತ್ತು ಅಂಗುಳಿನ ಶಸ್ತ್ರ ಚಿಕಿತ್ಸೆಯು ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಸಂಭವಿಸುವ ತುಟಿ ಅಥವಾ ಬಾಯಿಯ ಮೇಲ್ಪಾವಣಿಯಲ್ಲಿನ ಬೇರ್ಪಡುವಿಕೆಯನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ. ಚೀಲೋಪ್ಲಾಸ್ಟಿ (ತುಟಿ ದುರಸ್ತಿ) ಮತ್ತು ಪ್ಯಾಲಟೊ ಪ್ಲಾಸ್ಟಿ (ಅಂಗುಳಿ ದುರಸ್ತಿ) ಸೇರಿದಂತೆ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಸಾಮಾನ್ಯವಾಗಿ ಜನನದ ಮೊದಲ ವರ್ಷದಲ್ಲಿ ಸಾಮಾನ್ಯ ನೋಟ ಮತ್ತು ಕಾರ್ಯವನ್ನು ಪುನಃಸ್ಥಾಪಿಸಲು ನಡೆಸಲಾಗುತ್ತದೆ. ಯಾವುದೇ ಉಳಿದಿರುವ ವಿರೂಪಗಳನ್ನು ಪರಿಹರಿಸಲು ಮಾತು ಮತ್ತು ನೋಟವನ್ನು ಸುಧಾರಿಸಲು ನಂತರ ಹೆಚ್ಚಿನ ಶಸ್ತ್ರ ಚಿಕಿತ್ಸೆಗಳು ಬೇಕಾಗಬಹುದು ಎಂದರು.
ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಇದ್ದರು.






