ವಿಜಯನಗರ | ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು : ಡಿಸಿ ಕವಿತಾ ಎಸ್.ಮನ್ನಿಕೇರಿ

ವಿಜಯನಗರ(ಹೊಸಪೇಟೆ) : ಸರಕಾರಿ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಸೇರಿದಂತೆ ಬಹುಪೋಷಕಾಂಶಗಳ ನ್ಯೂನತೆಯನ್ನು ನಿವಾರಿಸಲು ಸರಕಾರ ಮಹತ್ವಾಕಾಂಕ್ಷಿ ಯೋಜನೆ ತಂದಿದ್ದು, ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಪುಣ್ಯಮೂರ್ತಿ ರಾಘಪ್ಪ ಶೆಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿ ಪರಿಸರ ಪುನಶ್ಚೇತನ ನಿಗಮ ಇಲಾಖೆಯಿಂದ ಗಣಿಭಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿ (ಸಿಇಪಿಎಂಐಜೆಡ್) ಕಾರ್ಯಕ್ರಮದಡಿ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಠಿಕ ಅಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.
ಸರ್ಕಾರದ ಮಹಾತ್ವಕಾಂಕ್ಷಿಯಿಂದಾಗಿ ಗಣಿಬಾಧಿತ 4 ಜಿಲ್ಲೆಗಳ 10 ತಾಲೂಕುಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೂರಕವಾಗಿ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಸರ್ಕಾರಿ ಶಾಲಾ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗಲಿದೆ. ಶಾಲಾ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಕಾಳಜಿಗೆ ಸರ್ಕಾರ ಆದ್ಯತೆ ನೀಡಿರುವುದು ಗಮನಾರ್ಹ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಂ ಷಾ ಮಕ್ಕಳಿಗೆ ಉಣಬಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ 31ನೇ ವಾರ್ಡಿನ ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.







