ವಿಜಯನಗರ | ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ : ಡಾ.ಕೆ.ರಾಧಿಕಾ

ವಿಜಯನಗರ(ಹೊಸಪೇಟೆ) : ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಎದುರಿಸಬೇಕು. ಆತ್ಮಹತ್ಯೆ ಒಂದು ಘೋರ ಅಪರಾಧ ಎಂದು ಮಾನಸಿಕ ಆರೋಗ್ಯ ಅಧಿಕಾರಿ ಡಾ.ಕೆ.ರಾಧಿಕಾ ಹೇಳಿದರು.
ನಗರದ ವಿಜಯನಗರ ಮಹಾವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಮಹಾವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.
ಮಾನಸಿಕ ಒತ್ತಡದಿಂದ ಆತ್ಮಹತ್ಯೆಯಂತಹ ಅಲೋಚನೆಗಳು ಹೆಚ್ಚುತ್ತವೆ. ಅದರಲ್ಲೂ ಯುವಜನತೆ ಆತ್ಮಹತ್ಯೆ ಚಿಂತನೆಗಳು ಹೆಚ್ಚಾಗಿ ಕಂಡು ಬಂದಿರುವುದು ಶೋಚನೀಯ. ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಯುವಕರಲ್ಲಿ ನವಚೈತನ್ಯ ಮೂಡಿಸುವ, ಬದುಕಿನ ಭರವಸೆ ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಮನೋವೈದ್ಯ ಡಾ.ಅನಿಲ್ ಕುಮಾರ್ ಮಾತನಾಡಿದರು.
ಈ ವೇಳೆಯಲ್ಲಿ ವಿಜಯನಗರ ಕಾಲೇಜು ಪ್ರಾಂಶುಪಾಲರಾದ ಡಾ.ಎಮ್.ಪ್ರಭು ಗೌಡ, ಕನ್ನಡ ವಿಭಾಗದ ಉಪನ್ಯಾಸಕ ಗಾದೆಪ್ಪ, ಜಿ.ಮಾರೇಶ್ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.







