Vijayanagar | ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ : ಸಿಇಒ ಅಕ್ರಮ್ ಷಾ

ವಿಜಯನಗರ(ಹೊಸಪೇಟೆ) : ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಿ, ಸಾರ್ವಜನಿಕರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹರಪನಹಳ್ಳಿ ತಾಲೂಕಿನ ವಿವಿಧ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 740 ಗ್ರಾಮಗಳ ಪೈಕಿ 153 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಗುರುತಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಹರಪನಹಳ್ಳಿ ತಾಲೂಕಿನ 24 ಗ್ರಾಮಗಳು, ಹಗರಿಬೊಮ್ಮನಹಳ್ಳಿ ತಾಲೂಕಿನ 5 ಗ್ರಾಮಗಳು ಹಾಗೂ ಹಡಗಲಿ ತಾಲೂಕಿನ 3 ಗ್ರಾಮಗಳು ಸೇರಿ ಒಟ್ಟು 32 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಗ್ರಾಮಗಳಿಗೆ 41 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಅಗತ್ಯವಿದ್ದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಾಲ್ಕು ನೀರಿನ ಟ್ಯಾಂಕರ್‌ಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಗ್ರಾಮದಲ್ಲಿನ ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಕುಡಿಯಲು ಯೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಪೂರೈಸಬೇಕು. ರಸ್ತೆ ಹಾಗೂ ಚರಂಡಿ ಪಕ್ಕದ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಒಂದು ವೇಳೆ ಪೈಪ್‌ಲೈನ್ ಹಾನಿಗೊಂಡು ನೀರು ಕಲುಷಿತಗೊಂಡರೆ ಸಂಬಂಧಪಟ್ಟ ಪಿಡಿಒ ಹಾಗೂ ಇಂಜಿನಿಯರ್‌ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಶುದ್ಧ ನೀರಿನ ಘಟಕಗಳ ದುರಸ್ತಿಗೆ ಸೂಚನೆ :
ಜಿಲ್ಲೆಯಲ್ಲಿರುವ 666 ಶುದ್ಧ ಕುಡಿಯುವ ನೀರಿನ ಘಟಕಗಳು ಸದಾ ಕಾರ್ಯನಿರ್ವಹಣೆಯಲ್ಲಿರಬೇಕು. ತಾಂತ್ರಿಕ ದೋಷ ಕಂಡುಬಂದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರು ನೀಡಲು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ 24x7 ಕಂಟ್ರೋಲ್ ರೂಮ್ ಸಹಾಯವಾಣಿ ಆರಂಭಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ 9480837823 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಮಾಹಿತಿ ನೀಡಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಒಗಳು ಉಪಸ್ಥಿತರಿದ್ದರು.






