ವಿಜಯನಗರ | ವ್ಯಸನ ಮುಕ್ತ ಸಮಾಜದ ಕನಸನ್ನು ಮಕ್ಕಳ ಎದೆಯಲ್ಲಿ ಬಿತ್ತಬೇಕಿದೆ : ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ವಿಜಯನಗರ(ಹೊಸಪೇಟೆ) : ಸುಂದರ ಸಮಾಜ ನಿರ್ಮಿಸಲು ವ್ಯಸನ ಮುಕ್ತ ಸಮಾಜದ ಕನಸನ್ನು ಮಕ್ಕಳ ಎದೆಯಲ್ಲಿ ಬಿತ್ತಬೇಕಾದ ಅನಿವಾರ್ಯತೆ ಇದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು.
ದುಶ್ಚಟಗಳಿಗೆ ದಾಸರಾಗುವ ಮುನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಅರಿತು ಮಾದಕ ವಸ್ತುಗಳಿಂದ ದೂರವಿರುವ ಸಂಕಲ್ಪ ಮಾಡಬೇಕಿದೆ. ಹಾಗಾದಾಗ ಮಾತ್ರವೇ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ನನಸಾಗಬಹುದು. ಮಕ್ಕಳು ನಿಮ್ಮ ಕುಟುಂಬದಲ್ಲಿನ ವ್ಯಸನಿಗಳಿಗೆ ಅವರನ್ನು ಕೈ ಮುಗಿದು ದುಶ್ಚಟಗಳನ್ನು ಬಿಡುವಂತೆ ಮನವೊಲಿಕೆಗೆ ಪ್ರಯತ್ನಿಸಬೇಕು ಎಂದರು.
ಖ್ಯಾತ ಚಿತ್ರನಟ ಅಜಯ್ ರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀಹರಿಬಾಬು.ಬಿ.ಎಲ್ ಮಾತನಾಡಿದರು.
ಇದೇ ವೇಳೆ ರಂಗಲೋಕ ಕಲಾ ಸಂಸ್ಥೆಯ ಕಲಾವಿದರು ನಾಟಕದ ಮೂಲಕ ಹಾಗೂ ಕಲಾವಿದ ಜೋಗಿ ತಾಯಪ್ಪ ಅವರು ಕಿರು ಚಿತ್ರ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಾಗರಾಜ ಹವಾಲ್ದಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಡ್ರಗ್ಸ್ ನಿಯಂತ್ರಣಾಧಿಕಾರಿ ಜಿ.ವಿ.ನಾರಾಯಣ ರೆಡ್ಡಿ, ಪ್ರಕಾಶ ಶಾನುಬಾಗ್, ಡಿವೈಎಸ್ಪಿ ಮಂಜುನಾಥ ಸೇರಿದಂತೆ ಸಾವಿರಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.







