ವಿಜಯನಗರ | ಪ್ರವಾಸಿ ಮಾರ್ಗದರ್ಶಿಗಳು ಜಿಲ್ಲೆಯ ಸಂಸ್ಕೃತಿಯ ರಾಯಭಾರಿಗಳು: ಡಿಸಿ ಕವಿತಾ ಎಸ್. ಮನ್ನಿಕೇರಿ

ವಿಜಯನಗರ (ಹೊಸಪೇಟೆ): ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಅವರು ಜಿಲ್ಲೆಯ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ರಾಯಭಾರಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆ
ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 87 ಪ್ರವಾಸಿ ಮಾರ್ಗದರ್ಶಿಗಳಿಗೆ ಶೂ ಮತ್ತು ಜಾಕೆಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಇಂದು ವಿತರಿಸಲಾದ ಸಮವಸ್ತ್ರಗಳು ಕೇವಲ ಸೌಲಭ್ಯವಲ್ಲ, ಮಾರ್ಗದರ್ಶಿಗಳ ವೃತ್ತಿಪರತೆಯ ಗುರುತಾಗಿದೆ. ಸಮವಸ್ತ್ರ ಧರಿಸುವುದರಿಂದ ಪ್ರವಾಸಿಗರಲ್ಲಿ ವಿಶ್ವಾಸ ಮೂಡುತ್ತದೆ ಹಾಗೂ ಸುರಕ್ಷಿತ ಭಾವನೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಅವರು ಸಲಹೆ ನೀಡಿದರು.
ಪ್ರವಾಸೋದ್ಯಮ ಕ್ಷೇತ್ರ ದಿನೇ ದಿನೇ ಬೆಳೆಯುತ್ತಿದ್ದು, ಮಾರ್ಗದರ್ಶಿಗಳು ಕೇವಲ ಹಳೆಯ ಇತಿಹಾಸಕ್ಕೆ ಸೀಮಿತವಾಗದೆ ಜಿಲ್ಲೆಯ ಹೊಸ ಪ್ರವಾಸಿ ತಾಣಗಳ ಬಗ್ಗೆಯೂ ನಿಖರ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಹೊಂದಿರಬೇಕು. ಅವರ ಉತ್ತಮ ಮಾರ್ಗದರ್ಶನ ಹಾಗೂ ಜಿಲ್ಲೆಯ ಆತಿಥ್ಯದಿಂದ ಪ್ರಭಾವಿತರಾದ ಪ್ರವಾಸಿಗರು ಮತ್ತೆ ಭೇಟಿ ನೀಡುವಂತಾಗಬೇಕು. ಆಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮದ ನೈಜ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.







