ವಿಜಯನಗರ | ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ : ಡಾ.ಎಂ.ರವಿ
ವಿಜಯನಗರ(ಹೊಸಪೇಟೆ) : 2025-26 ನೇ ಸಾಲಿನ ಕೇಂದ್ರ ಸರ್ಕಾರದ ಕಾಲುಬಾಯಿ ಜ್ವರ ರೋಗ ತಡೆಗೆ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ನ.3 ರಿಂದ ಡಿ.2 ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ.ಎಂ.ರವಿ ಅವರು ತಿಳಿಸಿದ್ದಾರೆ.
ಜಾನುವಾರುಗಳಲ್ಲಿ ಕಾಲುಬಾಯಿ ಜ್ವರವು ಎಲ್ಲಾ ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಖಾಯಿಲೆಯಾಗಿದ್ದು, ಇದು ಸಾಂಕ್ರಾಮಿಕ ರೋಗವಾಗಿದೆ. ಗಾಳಿ ಮೂಲಕ ಹರಡುತ್ತದೆ. ಈ ರೋಗದಿಂದ ದನ ಹಾಗೂ ಎಮ್ಮೆಗಳಲ್ಲಿ ಕಾಲು ಮತ್ತು ಬಾಯಿಗಳಲ್ಲಿ ಗಾಯವಾಗಿ ಅಪಾರವಾಗಿ ಬಳಲುವಿಕೆ, ನಿಶ್ಯಕ್ತಿ, ಕಡಿಮೆ ಹಾಲಿನ ಇಳುವರಿ ಮೂಲಕ ರೈತರ ಆರ್ಥಿಕ ಹಾನಿಗೆ ಕಾರಣವಾಗುತ್ತದೆ ಎಂದರು.
ಪ್ರಸ್ತುತ ಸಾಲಿನಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಜಿಲ್ಲೆಯಲ್ಲಿನ 2,58,988 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ನಿಗಧಿಯಾಗಿದೆ. ಲಸಿಕಾ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ 93 ಇಲಾಖಾ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದ್ದು, ಒಟ್ಟು 45 ಪಶು ವೈದ್ಯಾಧಿಕಾರಿಗಳು, 14 ಗುತ್ತಿಗೆ ಆಧಾರಿತ ಪಶು ವೈದ್ಯಾಧಿಕಾರಿಗಳು, 63 ಇಲಾಖಾ ಸಿಬ್ಬಂದಿಯೊಂದಿಗೆ 122 ಜನ ಹೊರಗುತ್ತಿಗೆ ಹಾಗೂ ಮೈತ್ರಿ ಕಾರ್ಯಕರ್ತರು ಸೇರಿದಂತೆ ಒಟ್ಟು 236 ಲಸಿಕೆದಾರರು ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಮತ್ತು ನಗರ ವ್ಯಾಪ್ತಿಗಳಲ್ಲಿ ರೈತರು ಹಾಗೂ ಸಾರ್ವಜನಿಕರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.







