ವಿಜಯನಗರ | ಮಹಿಳಾ ಮೀಸಲು ಒಪ್ಪಿದ್ದೇವೆ, ಆದರೆ ದಕ್ಷಿಣಕ್ಕೆ ಅನ್ಯಾಯ ಒಪ್ಪಲ್ಲ: ಕವಿತಾ ಈಶ್ವರ್ ಸಿಂಗ್

ಹೊಸಪೇಟೆ/ವಿಜಯನಗರ : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಹಿಳಾ ಮೀಸಲು ಮಸೂದೆಗೆ ಸ್ವಾಗತ ವ್ಯಕ್ತಪಡಿಸಿರುವ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಈಶ್ವರ್ ಸಿಂಗ್, ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿದ ಅವರು, ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಮೀಸಲು ಮಹತ್ವದ ಹೆಜ್ಜೆಯಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದರು.
ಮಹಿಳಾ ಮೀಸಲು ವಿಷಯ ಹೊಸದೇನಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆಯಾಗಿದ್ದರೂ, ಲೋಕಸಭೆಯಲ್ಲಿ ಒಮ್ಮತದ ಕೊರತೆ ಮತ್ತು ಕೆಲವು ಪಕ್ಷಗಳ ವಿರೋಧದಿಂದ ಜಾರಿಯಾಗಲಿಲ್ಲ ಎಂದು ಅವರು ನೆನಪಿಸಿದರು.
ಆದರೆ, ಪ್ರಸ್ತುತ ಕ್ಷೇತ್ರ ಪುನರ್ವಿಂಗಡಣೆ ವಿಚಾರ ಗಂಭೀರ ಚರ್ಚೆಗೆ ಒಳಪಡಬೇಕಾಗಿದೆ. ಜನಸಂಖ್ಯೆ ಆಧಾರಿತ ಮರುಹಂಚಿಕೆ ಕ್ರಮದಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ಸು ಕಂಡ ದಕ್ಷಿಣ ರಾಜ್ಯಗಳಿಗೆ ಇದು ಅನ್ಯಾಯವಾಗಬಹುದು. ಶಿಕ್ಷಣ, ಆರೋಗ್ಯ ಹಾಗೂ ಕುಟುಂಬ ಯೋಜನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯಗಳಿಗೆ ಈ ಕ್ರಮ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಕವಿತಾ ಈಶ್ವರ್ ಸಿಂಗ್ ಹೇಳಿದರು.
ಈ ಬೆಳವಣಿಗೆಗಳು ದೇಶದ ರಾಜಕೀಯ ಸಮತೋಲನಕ್ಕೆ ಧಕ್ಕೆಯುಂಟುಮಾಡುವ ಸಾಧ್ಯತೆ ಇರುವುದರಿಂದ, ಕೇಂದ್ರ ಸರ್ಕಾರವು ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ ದಕ್ಷಿಣ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.






