ವಿಜಯನಗರ | ಸಿಡಿಲು ಬಡಿದು ಹೊತ್ತಿ ಉರಿದ ಪವನ ವಿದ್ಯುತ್ ಯಂತ್ರ : ಸ್ಥಳೀಯರಲ್ಲಿ ಆತಂಕ

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಪವನ ವಿದ್ಯುತ್ ಉತ್ಪಾದನಾ ಯಂತ್ರ (ವಿಂಡ್ ಫ್ಯಾನ್) ಹೊತ್ತಿ ಉರಿದ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಸೋಮವಾರ ಸಂಜೆ ವೇಳೆಯಲ್ಲಿ ಕೂಡ್ಲಿಗಿ ತಾಲೂಕಿನಾದ್ಯಂತ ಸಿಡಿಲು-ಗುಡುಗು ಸಹಿತ ಸಾಧಾರಣ ಮಳೆಯಾಗಿತ್ತು. ಇದೇ ವೇಳೆ ಯಂಬಳ್ಳಿ ಗ್ರಾಮದ ಸಮೀಪದಲ್ಲಿರುವ ಪವನ ವಿದ್ಯುತ್ ಉತ್ಪಾದನಾ ಯಂತ್ರಕ್ಕೆ ಸಿಡಿಲು ಬಡಿದ ಪರಿಣಾಮ ಯಂತ್ರದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಜ್ವಾಲೆಗಳು ಮೇಲಕ್ಕೆ ಎದ್ದಿರುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನೊಂದೆಡೆ ಅಕಸ್ಮಾತ್ ಸುರಿದ ಮಳೆಯ ಪರಿಣಾಮ ರೈತಾಪಿ ವರ್ಗವೂ ಸಂಕಷ್ಟ ಅನುಭವಿಸಬೇಕಾಯಿತು. ಹೊಲಗಳಲ್ಲಿ ಕಟಾವು ಮಾಡಿ ಒಣಗಲು ಹಾಕಿದ್ದ ರಾಗಿ ಬೆಳೆ ಹಾಗೂ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ತೋಯದಂತೆ ಕಾಪಾಡಿಕೊಳ್ಳಲು ರೈತರು ಪರದಾಡಿದ ಘಟನೆಗಳು ಹಲವು ಕಡೆ ಕಂಡುಬಂದಿವೆ.
ಈ ಘಟನೆ ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ. ಸಿಡಿಲು ಬಡಿದ ಪರಿಣಾಮ ಪವನ ವಿದ್ಯುತ್ ಯಂತ್ರಕ್ಕೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಮಳೆ ಮತ್ತು ಸಿಡಿಲಿನ ಪರಿಣಾಮ ಒಂದು ಕಡೆ ರೈತರಿಗೆ ಆತಂಕ ಉಂಟಾಗಿದ್ದರೆ, ಮತ್ತೊಂದು ಕಡೆ ಪವನ ವಿದ್ಯುತ್ ಯಂತ್ರ ಹೊತ್ತಿ ಉರಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಗಮನ ಸೆಳೆಯುತ್ತಿವೆ.







