ವಿಜಯನಗರ | ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ
ಬಾಲಕಾರ್ಮಿಕತೆಯ ಸಂಪೂರ್ಣ ನಿರ್ಮೂಲನೆಯೇ ದಿನಾಚರಣೆಯ ಉದ್ದೇಶ : ಬಿಇಒ ಶೇಖರಪ್ಪ ಹೊರಪೇಟೆ

ವಿಜಯನಗರ(ಹೊಸಪೇಟೆ) : ಬಾಲ ಕಾರ್ಮಿಕ, ಕಿಶೋರ ಕಾರ್ಮಿಕ ಪದ್ದತಿಯನ್ನು ನಾಗರೀಕ ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದಲೇ ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಹೇಳಿದರು.
ನಗರದ ಚಿತ್ತವಾಡಿಗಿಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಕಾನೂನು ಸೇವಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲಕಾರ್ಮಿಕರ ಯೋಜನೆ, ತಾಲೂಕು ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು,
ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಮಕ್ಕಳನ್ನು ಕಾರ್ಮಿಕ ಪದ್ದತಿಗೆ ಬಳಸುವುದರಿಂದ ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿದಂತಾಗಲಿದೆ. ಅವರ ಶಿಕ್ಷಣ ಹಾಗೂ ಸರ್ವಾಂಗೀಣ ಪ್ರಗತಿಯ ಅವಕಾಶಗಳನ್ನು ತಡೆದಂತಾಗಲಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿಯೊಬ್ಬ ನಾಗರೀಕನ ಅದ್ಯ ಕರ್ತವ್ಯವಾಗಿದೆ. ಎಲ್ಲಾ ಉದ್ಯೋಗ ಮತ್ತು ಉದ್ಯೋಗ ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು, 18 ವರ್ಷದೊಳಗಿರುವ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಶಿಕ್ಷಾರ್ಹ(ವಾರೆಂಟ್ ರಹಿತ ಬಂಧಿಸಬಹುದಾದ) ಅಪರಾಧವಾಗಿದೆ. ಸಂಪೂರ್ಣವಾಗಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಕೇವಲ ಸರ್ಕಾರಗಳಿಂದಷ್ಟೇ ಸಾಧ್ಯವಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕಾರ್ಮಿಕ ಅಧಿಕಾರಿ ಸೂರ್ಯಪ್ಪ ದೊಂಬರಾಮಟ್ಟೂರ್ ಅವರು ಮಾತನಾಡಿದರು. ಈ ವೇಳೆ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ಶ್ವೇತಾಂಬರಿ, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಹಾವಲ್ದಾರ್, ದೈಹಿಕ ಶಿಕ್ಷಣಾಧಿಕಾರಿ ಶ್ರೀಕಾಂತ, ಪ್ರಮುಖರಾದ ರುದ್ರಪ್ಪ ಅಕ್ಕಿ, ಲಿಂಗರಾಜ, ಈಶ್ವರ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ್, ಜಿ.ಬಿ.ಧೂಪದ್ ನಿರ್ವಹಿಸಿದರು.







