Vijayanagara | ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಶಾಸಕ ಗವಿಯಪ್ಪಗೆ ಹೊರಗುತ್ತಿಗೆ ನೌಕರರ ಮನವಿ

ಹೊಸಪೇಟೆ/ವಿಜಯನಗರ: ರಾಜ್ಯ ಸರ್ಕಾರ ಪರಿಷ್ಕರಿಸಿ ಮೇ 22, 2026ರಿಂದ ಜಾರಿಗೆ ತರಲು ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನವನ್ನು ಎಲ್ಲ ಇಲಾಖೆಗಳಲ್ಲೂ ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪರಿಷ್ಕೃತ ಕನಿಷ್ಠ ವೇತನದ ಅಧಿಸೂಚನೆ ಹೊರಡಿಸಿದ್ದರೂ ಹಲವು ಇಲಾಖೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ಇದರ ಪ್ರಯೋಜನ ದೊರೆಯುತ್ತಿಲ್ಲ. ಹೀಗಾಗಿ ಎಲ್ಲ ಇಲಾಖೆಗಳಲ್ಲೂ ಪರಿಷ್ಕೃತ ಕನಿಷ್ಠ ವೇತನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ನೌಕರರು ಒತ್ತಾಯಿಸಿದರು.
ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಉದ್ದಿಮೆದಾರರ ಪರವಾಗಿ ಕಾರ್ಯನಿರ್ವಹಿಸುವಂತಿರುವ ಸಚಿವ ಸಂಪುಟ ಉಪಸಮಿತಿಯನ್ನು ರದ್ದುಗೊಳಿಸಬೇಕು. ಕನ್ನಡ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ 11 ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಶಾಸಕ ಎಚ್.ಆರ್. ಗವಿಯಪ್ಪ ಅವರು, ಈ ಕುರಿತು ಸೋಮವಾರ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕನ್ನಡ ವಿಶ್ವವಿದ್ಯಾಲಯದ ಇತ್ತೀಚಿನ ಬೆಳವಣಿಗೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೂನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.






