Vijayanagara | ಚಟುವಟಿಕೆ ಆಧಾರಿತ ಬೋಧನೆ ಮಕ್ಕಳಲ್ಲಿ ಪರಿಕಲ್ಪನೆ ನಿರ್ಮಾಣಕ್ಕೆ ಸಹಕಾರಿ : ಜಾವಿದ್ ಕಾರಂಗಿ

ಹೊಸಪೇಟೆ/ವಿಜಯನಗರ : ನಿಧಾನಗತಿ ಕಲಿಕೆಯ ಮಕ್ಕಳಲ್ಲಿ ವಿವಿಧ ವಿಷಯಗಳ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಮೂಡಿಸಲು ಶಿಕ್ಷಕರು ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಚಟುವಟಿಕೆ ಆಧಾರಿತ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಜಾವಿದ್ ಕೆ. ಕಾರಂಗಿ ಹೇಳಿದರು.
ಹೊಸಪೇಟೆ ತಾಲೂಕಿನ ಡಣಾಪುರದ ಮೈರಾಡ ತರಬೇತಿ ಕೇಂದ್ರದಲ್ಲಿ ಅಜಿಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಮೌಲಾನಾ ಆಜಾದ್ ಶಾಲೆಗಳ ಶಿಕ್ಷಕರಿಗಾಗಿ ಆಯೋಜಿಸಿದ್ದ ಕನ್ನಡ, ಆಂಗ್ಲ, ಉರ್ದು ಭಾಷೆ ಹಾಗೂ ಗಣಿತ ವಿಷಯಗಳ ಸೇತುಬಂಧ ತರಬೇತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಕರು ತರಗತಿಯಲ್ಲಿ ಪರಿಣಾಮಕಾರಿ ಬೋಧನೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಇಲಾಖೆ ಸದಾ ಸಿದ್ಧವಿದೆ ಎಂದು ತಿಳಿಸಿದ ಅವರು, ವೈವಿಧ್ಯಮಯ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಅಜಿಂ ಪ್ರೇಮ್‌ಜಿ ಫೌಂಡೇಶನ್ ಸಿದ್ಧಪಡಿಸಿರುವ ಶಿಕ್ಷಕರ ಕೈಪಿಡಿ ಮತ್ತು ವಿದ್ಯಾರ್ಥಿಗಳ ಕಾರ್ಯಹಾಳೆಗಳು ಉಪಯುಕ್ತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಜಿಂ ಪ್ರೇಮ್‌ಜಿ ಫೌಂಡೇಶನ್‌ನ ವಿಜಯನಗರ ಜಿಲ್ಲಾ ಮುಖ್ಯಸ್ಥ ಪುನೀತ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ಕೈಗೊಳ್ಳುತ್ತಿರುವ ಹೊಸ ಪ್ರಯೋಗಗಳು ತರಗತಿ ಪ್ರಕ್ರಿಯೆಗೆ ನೆರವಾದಾಗ ಮಾತ್ರ ತಮ್ಮ ಕಾರ್ಯಕ್ಕೆ ನಿಜವಾದ ತೃಪ್ತಿ ಸಿಗುತ್ತದೆ ಎಂದು ಹೇಳಿದರು.
ಎರಡು ದಿನಗಳ ತರಬೇತಿಯಲ್ಲಿ ಕನ್ನಡ, ಉರ್ದು ಹಾಗೂ ಆಂಗ್ಲ ಭಾಷೆಗಳ ಕಲಿಕೆಯಲ್ಲಿ ಮಾತುಗಾರಿಕೆ, ಮೂಲಾಕ್ಷರ, ಗುಣಿತಾಕ್ಷರ, ಒತ್ತಕ್ಷರ, ಓದು ಹಾಗೂ ಬರವಣಿಗೆ ಕೌಶಲ್ಯಗಳ ಅಭಿವೃದ್ಧಿಗೆ ಪೂರಕವಾಗುವ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಪರಿಣಾಮಕಾರಿ ವಿಧಾನಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಯಿತು.
ತರಬೇತಿಯಲ್ಲಿ ಅಜಿಂ ಪ್ರೇಮ್‌ಜಿ ಫೌಂಡೇಶನ್‌ನ ಡಾ. ನಿರಂಜನ್ ಗಾಣಿಗೇರ, ಸಂತೋಷ್ ಕುಮಾರ್ ಸಿ.ಎಸ್., ಜಗದೀಶ್, ಸಂತೋಷ್ ಹುಲ್ಲೂರು ಹಾಗೂ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ್ ಬಸರಕೋಡು ತರಬೇತಿ ನೀಡಿದರು. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್ ಜೆ., ಡಾ. ನಾಗರಾಜ್, ರಂಗಪ್ಪ ಸೊಬಾಟಿ, ಶ್ರೀಮತಿ ತಫಿಮಾ, ಸುಂಕಪ್ಪ ವೈ., ಬಸವರಾಜ್ ಕೆ. ಹಾಗೂ ಗಂಗಾಧರ ಸಹಕಾರ ನೀಡಿದರು.






