Vijayanagara | ವಕೀಲರ ಸಮಸ್ಯೆಗಳಿಗೆ ಸ್ಪಂದಿಸಲು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಬದ್ಧ: ಡಾ.ರಫಿಯಾ ಕುಲ್ಲಾಯಪ್ಪ

ವಿಜಯನಗರ: ನಗರದ ಬುದ್ಧ ಬಸವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ವತಿಯಿಂದ ನಗರದ ಪ್ರಮುಖ ವಕೀಲರ ನೇತೃತ್ವದಲ್ಲಿ ವಕೀಲರ ಸಮಸ್ಯೆಗಳ ಕುರಿತು ಸಮಾವೇಶ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ರಫಿಯಾ ಕುಲ್ಲಾಯಪ್ಪ, ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಸಂವಿಧಾನದ ರಕ್ಷಕರಾಗಿ ನಾವು ಕಾಪಾಡುತ್ತೇವೆ. ಸಾರ್ವಜನಿಕ ವಲಯದಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂದರು.
ಆದರೆ, ವಕೀಲರ ವೈಯಕ್ತಿಕ ಜೀವನದಲ್ಲಿ ಸಂಕಷ್ಟ ಎದುರಾದಾಗ ಅವರಿಗೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಇಂದಿಗೂ ಉತ್ತರವಿಲ್ಲದೆ ಉಳಿದಿದೆ. ಇಂತಹ ಸಂದರ್ಭದಲ್ಲಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಸಂಸ್ಥೆಯು ಸಂಕಷ್ಟದಲ್ಲಿರುವ ವಕೀಲರಿಗೆ ಆಶಾಕಿರಣವಾಗಿ ಮೂಡಿಬಂದಿದೆ ಎಂದು ಹೇಳಿದರು.
ಇಂತಹ ವೇದಿಕೆಗಳಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವ ಮೂಲಕ ಸಂಸ್ಥೆಯನ್ನು ಬೆಳೆಸಬೇಕು. ಮುಂದಿನ ದಿನಗಳಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸ ಈ ಸಂಘಟನೆಯಿಂದ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆರ್.ಕೆ.ದೇಸಾಯಿ, ಕೋಟೇಶ್ವರ ರಾವ್, ಡಾ.ರಫಿಯಾ ಕುಲ್ಲಾಯಪ್ಪ, ಎ.ಕರುಣಾನಿಧಿ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.






