Vijayanagara | ಸುಳ್ಳು ಜಾತಿ ಪ್ರಮಾಣ ಪತ್ರ ವಿತರಣೆ ಆರೋಪ : ಕ್ರಮಕ್ಕೆ ಡಿಎಸ್ಎಸ್ ಆಗ್ರಹ

ಕೂಡ್ಲಿಗಿ/ವಿಜಯನಗರ: ತಾಲೂಕಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಅಕ್ರಮವಾಗಿ ವಿತರಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಸಂಘಟನೆಯು ತಹಶೀಲ್ದಾರ್ ವಿ.ಕೆ.ನೇತ್ರಾವತಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಬಡೇಲಡಕು ಗ್ರಾಮದ ಇಂದಿರಾ ಗುಂಡಪಲ್ಲಿ ಎಂಬುವವರಿಗೆ ನಿಯಮಬಾಹಿರವಾಗಿ ಪರಿಶಿಷ್ಟ ಜಾತಿಯ (ಮಾದಿಗ) ಪ್ರಮಾಣ ಪತ್ರ ನೀಡಲಾಗಿದೆ ಎಂದು ಸಂಘಟನೆ ದೂರಿದೆ.
ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರೂ, ಕೂಡ್ಲಿಗಿ ಹೋಬಳಿ ಕಂದಾಯ ನಿರೀಕ್ಷಕರು ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಕೇವಲ ಎರಡು ತಿಂಗಳೊಳಗೆ ಕಾನೂನುಬಾಹಿರವಾಗಿ ಜಾತಿ ಪ್ರಮಾಣ ಪತ್ರವನ್ನು ಅನುಮೋದಿಸಿದ್ದಾರೆ ಎಂದು ಡಿಎಸ್ಎಸ್ ಆರೋಪಿಸಿದೆ.
ಈ ಅಕ್ರಮವು ದಶಕಗಳಿಂದ ಮೀಸಲಾತಿ ಆಧಾರಿತ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಅಸ್ಪೃಶ್ಯ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಸಂಘಟನೆ ಕಿಡಿಕಾರಿದೆ.
ಅಕ್ರಮವಾಗಿ ಜಾತಿ ಪ್ರಮಾಣ ಪತ್ರ ಪಡೆದಿರುವ ವ್ಯಕ್ತಿಯ ವಿರುದ್ಧ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಕಂದಾಯ ನಿರೀಕ್ಷಕರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ಸಂಬಂಧಪಟ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಡಿಎಸ್ಎಸ್ ಆಗ್ರಹಿಸಿದೆ.




