ವಿಜಯನಗರ | ಸಮಾಜಮುಖಿ ಕಾರ್ಯಗಳಲ್ಲಿ ಅಂಜುಮನ್ ಕಮಿಟಿ ಮಾದರಿ : ಕೊಟ್ಟೂರು ಸ್ವಾಮೀಜಿ

ಹೊಸಪೇಟೆ : ನಗರದ ಅಂಜುಮನ್ ಶಾದಿಮಹಲ್ ಆವರಣದಲ್ಲಿ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಪವಿತ್ರ ಮಿಲಾದುನ್ನಬಿ ಪ್ರಯುಕ್ತ 12 ಜೋಡಿಗಳ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.
ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಎಚ್.ಎನ್.ಮುಹಮ್ಮದ್ ಇಮಾಮ್ ನಿಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮೂಹಿಕ ವಿವಾಹಗಳು ವಧು-ವರರ ಪೋಷಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತವೆ. ವೈಯಕ್ತಿಕ ಮದುವೆಗಳಲ್ಲಿ ಕೇವಲ ಬಂಧುಗಳ ಆಶೀರ್ವಾದವಿದ್ದರೆ, ಇಂತಹ ವೇದಿಕೆಗಳಲ್ಲಿ ಎಲ್ಲಾ ಧರ್ಮಗುರುಗಳು ಹಾಗೂ ಗಣ್ಯರ ಹಾರೈಕೆ ನೂತನ ಜೋಡಿಗಳಿಗೆ ಲಭಿಸುತ್ತದೆ ಎಂದರು.
ಅಂಜುಮನ್ ಕಮಿಟಿಯು ಕಳೆದ 61 ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಸತತ 6 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಾ ಬಂದಿರುವ ಈ ಸಂಸ್ಥೆಯು, ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ, ಗರ್ಭಿಣಿಯರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ, ವಿಧವಾ ವೇತನ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವಂತಹ ಹತ್ತು ಹಲವು ಜನಪರ ಕಾರ್ಯಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ವಧುವರರಿಗೆ ಆಶೀರ್ವದಿಸಿದ ಕೊಟ್ಟೂರು ಸ್ವಾಮಿಮಠದ ಶ್ರೀ ಮಹಾರಾಜ ನಿರಂಜನ ಜಗದ್ಗುರು ಕೊಟ್ಟೂರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಮದುವೆ ಎಂಬುದು ಕೇವಲ ದೈಹಿಕ ಭಾವನೆಯಲ್ಲ, ಅದು ಮಾನಸಿಕವಾಗಿ ಪರಸ್ಪರ ಅರ್ಥ ಮಾಡಿಕೊಂಡು ಸಾಗುವ ಜೀವನದ ದಾರಿ. ಪ್ರಕೃತಿಯ ಮುಂದೆ ನಾವೆಲ್ಲರೂ ಸಮಾನರು. ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಾಮರಸ್ಯದಿಂದ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೆಹಬೂಬ್ ಪೀರಾ ಸಾಬ್, ಮಾಜಿ ನಗರಾಭಿವೃದ್ದಿ ಪ್ರಾಧಿಕಾರದ ಆಧ್ಯಕ್ಷರಾದ ಆರ್.ಕೊಟ್ರೇಶ್, ಸಾಲಿ ಸಿದ್ದಯ ಸ್ವಾಮಿ, ಗುಜ್ಜಲ್ ನಾಗರಾಜ್, ರಿಯಾಝ್, ಮುಕ್ತಾರ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಮ್.ಫಿರೋಝ್ ಖಾನ್, ಕಾರ್ಯದರ್ಶಿಗಳಾದ ಎಮ್. ಡಿ.ಅಬೂಬಕ್ಕರ್, ಜಿ.ಅನ್ಸರ್ ಭಾಷಾ, ಸಹಕಾರ್ಯದರ್ಶಿಗಳಾದ ಡಾ.ಎಮ್.ಡಿ. ದುರ್ವೇಶ್ ಮೈನುದ್ದಿನ್, ಕೋತ್ವಾಲ್ ಮುಹಮ್ಮದ್ ಮೋಸಿನ್, ಸದ್ದಾಮ್ ಹುಸೇನ್, ಎಲ್.ಗುಲಾಮ್ ರಸೂಲ್ ಮತ್ತಿತರರು ಭಾಗವಹಿಸಿದ್ದರು.







