Vijayanagara | ಹಂಪಿ ವ್ಯಾಪ್ತಿಯಲ್ಲಿ ಹೋಂ ಸ್ಟೇ ನೋಂದಣಿಗೆ ಅರ್ಜಿ ಆಹ್ವಾನ

ವಿಜಯನಗರ (ಹೊಸಪೇಟೆ), ಆ.25: ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ ಹಳ್ಳಿಗಳಲ್ಲಿ ಹೋಂ ಸ್ಟೇ ನಡೆಸಲು ಅನುಮತಿ ಪಡೆಯಲು ಪ್ರವಾಸೋದ್ಯಮ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಹೋಂ ಸ್ಟೇ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿರುವವರ ಪೈಕಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೋಂ ಸ್ಟೇ ನಡೆಸಲು ಉದ್ದೇಶಿಸಿರುವವರು ಕಟ್ಟಡ ನಿರ್ಮಾಣಕ್ಕೆ ಪ್ರಾಧಿಕಾರದಿಂದ ಅನುಮತಿ ಪಡೆದಿರುವುದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿಗೆ 15 ದಿನಗಳೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
2002ಕ್ಕೂ ಮುನ್ನ, ಅಂದರೆ ಪ್ರಾಧಿಕಾರ ರಚನೆಯಾಗುವುದಕ್ಕೂ ಮೊದಲು ಕಟ್ಟಡ ನಿರ್ಮಿಸಿದ್ದಲ್ಲಿ, ಈ ಕುರಿತು ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ದಾಖಲೆಗಳನ್ನು ಪಡೆದು ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಸಲ್ಲಿಸಬೇಕು.
ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸದ ಹೋಂ ಸ್ಟೇ ಅರ್ಜಿಗಳನ್ನು ನಿಯಮಾನುಸಾರ ತಿರಸ್ಕರಿಸಲಾಗುವುದು. ಅಲ್ಲದೆ, ಪ್ರವಾಸೋದ್ಯಮ ಇಲಾಖೆಯಿಂದ ನಿಯಮಾನುಸಾರ ನೋಂದಣಿ ಪ್ರಮಾಣಪತ್ರ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವುದು ಅಥವಾ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸುವುದು ಕಂಡುಬಂದರೆ, ಅಂತಹ ಹೋಂ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.






