Vijayanagara | ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಕೂಡ್ಲಿಗಿ/ವಿಜಯನಗರ: ತಾಲೂಕಿನ ಚೌಡಾಪುರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಬೆಳಗಿನ ಜಾವ ಹೊಲದಲ್ಲಿ ನೀರು ಹಾಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ರೈತ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗ್ರಾಮದ ರೈತ ಚನ್ನವೀರಪ್ಪ ಅವರು ತಮ್ಮ ಹೊಲದಲ್ಲಿ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಕರಡಿ ತಲೆಯ ಭಾಗವನ್ನು ಪರಚಿ ಗಾಯಗೊಳಿಸಿದೆ. ನೋವಿನಿಂದ ಚನ್ನವೀರಪ್ಪ ಕೂಗಿಕೊಂಡಾಗ ಸಮೀಪದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ಧಾವಿಸಿ ನೆರವಿಗೆ ಬಂದಿದ್ದಾರೆ. ಬಳಿಕ ಗಾಯಾಳುವನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಸ್ಪಂದಿಸಿ, ತಮ್ಮ ಆಪ್ತ ಸಹಾಯಕ ಮರುಳಸಿದ್ದಪ್ಪ ಅವರನ್ನು ಆಸ್ಪತ್ರೆಗೆ ಕಳುಹಿಸಿ ಗಾಯಾಳುವಿನ ಆರೋಗ್ಯ ವಿಚಾರಿಸುವಂತೆ ಸೂಚಿಸಿದ್ದಾರೆ. ಗಾಯಾಳು ಹಾಗೂ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿ ವೈಯಕ್ತಿಕ ಆರ್ಥಿಕ ನೆರವನ್ನೂ ನೀಡಿದ್ದಾರೆ.
ಆಪ್ತ ಸಹಾಯಕರ ಮೂಲಕ ಗಾಯಾಳುವಿನ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದ ಶಾಸಕರು, ಕುಟುಂಬದ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೆ, ಬಳ್ಳಾರಿಯ ವಿಮ್ಸ್ ನಿರ್ದೇಶಕರು ಹಾಗೂ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗಾಯಾಳುವಿಗೆ ಅಗತ್ಯ ತುರ್ತು ಚಿಕಿತ್ಸೆ ಮತ್ತು ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.
ಶಾಸಕರ ಸೂಚನೆಯಂತೆ ಗಾಯಾಳು ಚನ್ನವೀರಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ ಅವರು ಗಾಯಾಳುವಿನ ಕುಟುಂಬದೊಂದಿಗೆ ಇದ್ದು, ವಿಮ್ಸ್ಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ನೆರವಾಗಿದ್ದಾರೆ.
ಘಟನೆಯ ಸಂದರ್ಭದಲ್ಲಿ ಚೌಡಾಪುರ ಹಾಗೂ ನೆರೆಯ ಐಗಳ ಮಲ್ಲಾಪುರ ಗ್ರಾಮದ ಗ್ರಾಮಸ್ಥರೂ ನೆರವಿಗೆ ಧಾವಿಸಿದ್ದರು.






