Vijayanagara | ಅನ್ಯಾಯ, ದೌರ್ಜನ್ಯದ ವಿರುದ್ಧ ಮೌನ ಮುರಿದು ಧ್ವನಿಯೆತ್ತಿ: ಡಾ.ನಾಗಲಕ್ಷ್ಮಿ ಚೌಧರಿ

ವಿಜಯನಗರ (ಹೊಸಪೇಟೆ) : ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಸಮಾಜದಲ್ಲಿ ದೊರೆಯುತ್ತಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳು ಹಾಗೂ ಅವಮಾನಗಳು ಎದುರಾಗುವುದು ಸಹಜ. ಆದರೆ ಅವುಗಳಿಗೆ ಎದೆಗುಂದದೆ, ಅವಮಾನಗಳನ್ನು ಮೆಟ್ಟಿನಿಂತು ಮುನ್ನಡೆಯುವ ಛಲ ಮಹಿಳೆಯರಲ್ಲಿ ಇರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.
ನಗರದ ವಿಜಯನಗರ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಜಯನಗರ ಮಹಾವಿದ್ಯಾಲಯ, ಮಹಿಳಾ ಸಬಲೀಕರಣ ಕೋಶ ಹಾಗೂ ಆಂತರಿಕ ದೂರು ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ವಿಜಯನಗರ ಮಹಾವಿದ್ಯಾಲಯದ ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮತ್ತೊಬ್ಬರ ಮುಂದೆ ಕೈಚಾಚಿ ಬೇಡುವ ಸ್ಥಿತಿಯಲ್ಲಿ ಇರಬಾರದು. ಬದಲಾಗಿ, ಮತ್ತೊಬ್ಬರಿಗೆ ನೆರವಾಗುವಷ್ಟು ಸಾಮರ್ಥ್ಯ ಹಾಗೂ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಹಲವು ವರ್ಷಗಳಿಂದ ಮಹಿಳೆಯರನ್ನು ಮಕ್ಕಳನ್ನು ಹೆರುವ ಮತ್ತು ಕುಟುಂಬದ ಜವಾಬ್ದಾರಿ ನಿರ್ವಹಿಸುವ ವ್ಯಕ್ತಿಗಳಾಗಿ ಮಾತ್ರ ನೋಡುವ ಮನೋಭಾವ ಸಮಾಜದಲ್ಲಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪ್ರತಿಯೊಬ್ಬ ಮಹಿಳೆಯೂ ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತರಾಗಬೇಕು. ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಸಾಧನೆ ಮಾಡುವ ಗುರಿಯೊಂದಿಗೆ ನಿರಂತರ ಪ್ರಯತ್ನಿಸಬೇಕು. ಹೆಣ್ಣು ಮಕ್ಕಳು ಹುಟ್ಟಿರುವುದೇ ಜೀವನದಲ್ಲಿ ಏನಾದರೂ ಸಾಧಿಸಲು ಹೊರತು ಅಡುಗೆಮನೆಗೆ ಸೀಮಿತವಾಗಿರಲು ಅಲ್ಲ. ಮಹಿಳೆಯರ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಮತ್ತು ಗೌರವ ದೊರೆತಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರೀತಿ-ಪ್ರೇಮದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಬೆದರಿಕೆ ಹಾಕುವುದು ಅಥವಾ ಮಹಿಳೆಯರು ಯಾವುದೇ ರೀತಿಯ ಕಿರುಕುಳ ಹಾಗೂ ಶೋಷಣೆಗೆ ಒಳಗಾದಾಗ ಭಯಭೀತರಾಗದೆ ಧೈರ್ಯದಿಂದ ಎದುರಿಸಬೇಕು. ಇಂತಹ ಸಂದರ್ಭಗಳಲ್ಲಿ ಮೌನವಾಗಿರದೆ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬೇಕು. ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವುದೇ ಮಹಿಳೆಯರ ಮೊದಲ ಹೆಜ್ಜೆಯಾಗಬೇಕು ಎಂದು ಸಲಹೆ ನೀಡಿದರು.
ಮಹಿಳಾ ಶಕ್ತಿಯ ಸಂಕಲ್ಪ :
ಮಹಿಳೆಯರು ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಇನ್ನು ಮುಂದೆ ಮೌನವಾಗಿರದೆ ಧೈರ್ಯದಿಂದ ಧ್ವನಿಯೆತ್ತುವ ಸಂಕಲ್ಪ ಮಾಡಬೇಕು. ಮಹಿಳೆಯರ ಹಕ್ಕುಗಳು, ಸ್ವಾಭಿಮಾನ ಮತ್ತು ಸಮಾನತೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಹೋರಾಡಬೇಕು. ಉತ್ತಮ ಕನಸುಗಳನ್ನು ಕಾಣುವುದಷ್ಟೇ ಅಲ್ಲದೆ, ಅವುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ಶ್ರಮಿಸಬೇಕು. ಪರಸ್ಪರ ಸಹಕಾರ ಮತ್ತು ದೃಢಸಂಕಲ್ಪದ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆ ತಂದು ಹೊಸ ಇತಿಹಾಸ ನಿರ್ಮಿಸಬೇಕು. ಮಹಿಳೆಯರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಸ್ತ್ರೀಶಕ್ತಿಯ ಜಾಗೃತಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನೆ :
ಸಂವಾದದ ವೇಳೆ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ಹೊಸಪೇಟೆಯಿಂದ ಮಗ್ಗಿಮಾವನಹಳ್ಳಿ ಮತ್ತು ಮರಿಯಮ್ಮನಹಳ್ಳಿಗೆ ಹಾಗೂ ಬೊಮ್ಮಗಟ್ಟದಿಂದ ಹೊಸಪೇಟೆಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಬಸ್‌ಗಳಿದ್ದರೂ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಸಾಕಷ್ಟು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಮುಂದುವರಿಸಲು ಹಿಂದೇಟು ಹಾಕುತ್ತಿದ್ದು, ಕೆಲವರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಿದರು.
ಮತ್ತೊಬ್ಬ ವಿದ್ಯಾರ್ಥಿನಿ ಜಂಬುನಾಥಹಳ್ಳಿ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ವಸತಿ, ನೀರು, ಆಹಾರ ಹಾಗೂ ಮೂಲಸೌಕರ್ಯಗಳ ಕೊರತೆಯಿರುವ ಬಗ್ಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಕರೆ ಮಾಡಿ ದೂರಿನ ಕುರಿತು ಮಾಹಿತಿ ಪಡೆದರು. ವಸತಿನಿಲಯದಲ್ಲಿ ಸಮಸ್ಯೆಗಳಿದ್ದರೆ ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಕಾಲೇಜಿನ ಅಧ್ಯಕ್ಷ ಎನ್. ಮಲ್ಲಿಕಾರ್ಜುನ ಮೆಟ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಡಿವೈಎಸ್ಪಿ ಮುರಳೀಧರ್, ವಿವಿ ಸಂಘದ ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ಗಂಗಪ್ಪ, ಮಹಾಂತೇಶ್ ಎನ್. ಆರಾಧ್ಯಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






