Vijayanagara | ಬಾಲ್ಯವಿವಾಹ ತಡೆಗೆ ಮಕ್ಕಳೇ ಜಾಗೃತರಾಗಿ ಮುಂದಾಗಬೇಕು: ಟಿ.ರಾಮಾಂಜನೇಯ

ವಿಜಯನಗರ (ಹೊಸಪೇಟೆ) : ಮಕ್ಕಳು ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾದಾಗ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ನಡೆಯುವ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳನ್ನು ತಡೆಯಲು ಮಕ್ಕಳೇ ಜಾಗೃತರಾಗಿ ಮುಂದಾಗಬೇಕು ಎಂದು ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಕರೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಸ್ನೇಹ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳ ಸಂಸತ್-2026’ರ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಂದಿ 18 ವರ್ಷದೊಳಗಿನವರಿದ್ದಾರೆ. ಕಾನೂನು ಜಾರಿಯಲ್ಲಿದ್ದರೂ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ಬಾಲ್ಯವಿವಾಹಗಳು ಮುಂದುವರಿದಿದ್ದು, ಇಂದಿಗೂ ಸವಾಲಾಗಿ ಉಳಿದಿವೆ. ನಗರ ಪ್ರದೇಶಗಳಲ್ಲಿ ಕಾನೂನಿನ ಭಯದಿಂದ ಬಾಲ್ಯವಿವಾಹ ನಿಯಂತ್ರಣದಲ್ಲಿದ್ದರೆ, ಗ್ರಾಮೀಣ ಪ್ರದೇಶ ಹಾಗೂ ತಾಂಡಾಗಳಲ್ಲಿ ಈಗಲೂ ಇಂತಹ ಪ್ರಕರಣಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.
ಹೆಣ್ಣುಮಕ್ಕಳು 18 ವರ್ಷ ತುಂಬುವವರೆಗೂ ಮದುವೆಯಾಗುವುದಿಲ್ಲ ಎಂದು ಪೋಷಕರಿಗೆ ದೃಢವಾಗಿ ತಿಳಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಕೆಲವು ಗ್ರಾಮೀಣ ಶಾಲೆಗಳಲ್ಲಿ ಕೊಠಡಿ, ಶೌಚಾಲಯಗಳ ಕೊರತೆ ಹಾಗೂ ಅಗತ್ಯ ಕಲಿಕಾ ಮಟ್ಟದ ಸಮಸ್ಯೆಗಳು ಕಂಡುಬರುತ್ತಿವೆ. ಮಕ್ಕಳು ನೇರವಾಗಿ ಸಂಘಟಿತರಾಗಿ ಹೋರಾಡಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ, ಅವರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರಲು ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ನಡೆಸಿದ ಮಕ್ಕಳ ಸಂವಾದದ ಮಾದರಿಯಲ್ಲೇ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಫಲವಾಗಿ ಇಂದು ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ಹಾಗೂ ಪಾದರಕ್ಷೆಗಳು ದೊರೆಯುತ್ತಿವೆ ಎಂದು ತಿಳಿಸಿದರು.
ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳದೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜ್ಞಾನಾರ್ಜನೆಗಾಗಿ ಪ್ರತಿದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಹಾನ್ ಸಾಧಕರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಉನ್ನತ ಸ್ಥಾನಕ್ಕೇರುವ ಗುರಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನಾಗವೇಣಿ, ಕ್ಷೇತ್ರ ಶಿಕ್ಷಣ ಇಲಾಖೆಯ ಇಸಿಒ ರಾಜು, ಕರ್ನಾಟಕ ಪತ್ರಿಕಾ ಸಂಘದ ಅಧ್ಯಕ್ಷ ರಾಜು, ಸಾಕಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಳಿದಾಸ, ಭೀಮ ಸಂಘ ದುಡಿಯುವ ಮಕ್ಕಳ ಸಂಘ ಸಂಸ್ಥೆಯ ಕ್ಷೇತ್ರ ಸಂಯೋಜಕ ಎಸ್. ಕೊಟ್ರೇಶ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.






