ವಿಜಯನಗರ | ಪೋಲಿಯೋ ಮುಕ್ತ ದೇಶ ನಿರ್ಮಾಣಕ್ಕೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ : ಡಾ.ಎಲ್.ಆರ್.ಶಂಕರ್ ನಾಯ್ಕ

ಸಾಂದರ್ಭಿಕ ಚಿತ್ರ
ವಿಜಯನಗರ (ಹೊಸಪೇಟೆ), ಡಿ.20: ದೇಶವನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತವನ್ನಾಗಿಸಲು ಸಾರ್ವಜನಿಕರು ಐದು ವರ್ಷದೊಳಗಿನ ಮಕ್ಕಳಿಗೆ ಹತ್ತಿರದ ಪೋಲಿಯೋ ಲಸಿಕೆ ಬೂತ್ಗಳಿಗೆ ತೆರಳಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಅವರು ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ವಿಶೇಷ ಚೇತನರ ಸಂಘಟನೆಗಳ ವೇದಿಕೆ, ಮಲ್ಲಿಗೆ ಪ್ಯಾರಾ ಮೆಡಿಕಲ್ ಕಾಲೇಜ್, ತುಂಗಭದ್ರ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಟಿಎಂಇ ಸೊಸೈಟಿ ಆಫ್ ನರ್ಸಿಂಗ್ ಕಾಲೇಜ್ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗದರ್ಶನದಲ್ಲಿ ಭಾರತ ಸಂಪೂರ್ಣವಾಗಿ ಪೋಲಿಯೋ ಮುಕ್ತ ರಾಷ್ಟ್ರವಾಗುವಲ್ಲಿ ಯಶಸ್ವಿಯಾಗಿದೆ. ಆದರೆ ನೆರೆಯ ಪಾಕಿಸ್ತಾನದಲ್ಲಿ 30 ಮತ್ತು ಅಪಘಾನಿಸ್ತಾನದಲ್ಲಿ 9 ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೆ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕಿದೆ ಎಂದು ಅವರು ಹೇಳಿದರು.
ಡಿ.21ರಿಂದ 24ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಸಂದರ್ಭದಲ್ಲಿ, ಈ ಹಿಂದೆ ಲಸಿಕೆ ಹಾಕಿಸಿದ್ದ ಮಕ್ಕಳಿಗೂ ಈ ಬಾರಿ ತಪ್ಪದೇ ಮತ್ತೊಮ್ಮೆ ಲಸಿಕೆ ಹಾಕಿಸಬೇಕಿದೆ. ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,31,363 ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ 1,087 ತಂಡಗಳು, 2,174 ಲಸಿಕೆದಾರರು, 1,036 ಲಸಿಕೆ ಬೂತ್ಗಳು, 175 ಮೇಲ್ವಿಚಾರಕರು, 45 ಟ್ರಾನ್ಸಿಟ್ ತಂಡಗಳು, 628 ಹೆಚ್ಆರ್ಎ ಸೈಟ್ಗಳು ಹಾಗೂ 6 ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೋಲಿಯೋ ಜಾಗೃತಿ ಜಾಥಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಿಂದ ಆರಂಭವಾಗಿ ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಡಾ.ಪುನೀತ್ ರಾಜಕುಮಾರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ರಾಮಾ ಟಾಕೀಸ್ ಮುಂಭಾಗದಿಂದ ದೊಡ್ಡ ಮಸೀದಿ ಮಾರ್ಗವಾಗಿ ಪುನಃ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದವರೆಗೆ ಸಾಗಿತು. ಈ ವೇಳೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪೋಲಿಯೋ ಸಂಬಂಧಿತ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕೆ. ರಾಧಿಕಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ, ತಾಲೂಕು ವೈದ್ಯಾಧಿಕಾರಿ ಡಾ. ವಿನೋದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ರಘುನಾಥ ದೀಪಾಲಿ, ಮಕ್ಕಳ ತಜ್ಞೆ ಡಾ. ಲಲಿತಾ ಜೈನ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







