Vijayanagara | ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಐಯಿಂದ ಹಕ್ಕೊತ್ತಾಯ ಪತ್ರ

ಕೊಟ್ಟೂರು (ವಿಜಯನಗರ) : ಗ್ರಾಮೀಣ ಭಾಗದ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಮಂಗಳವಾರ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಗ್ರಾಮ ಮಟ್ಟದಲ್ಲಿ ಸಕಾಲಕ್ಕೆ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಸಾರ್ವಜನಿಕರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಪಕ್ಷದ ಮುಖಂಡರು ಒತ್ತಾಯಿಸಿದರು.
ಗುಣಮಟ್ಟದ ಶಿಕ್ಷಣ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಅಗತ್ಯವಿರುವ ಕಡೆ ಹೊಸ ಕೊಠಡಿಗಳನ್ನು ನಿರ್ಮಿಸಬೇಕು.
ಉದ್ಯೋಗ ಭದ್ರತೆ: ಗ್ರಾಮೀಣ ಶ್ರಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ವಸತಿ ಸೌಲಭ್ಯ: ನಿವೇಶನ ರಹಿತರು ಹಾಗೂ ಬಡ ಕುಟುಂಬಗಳಿಗೆ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಡಬೇಕು.
ನೈರ್ಮಲ್ಯ ಮತ್ತು ಕುಡಿಯುವ ನೀರು: ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಪೂರೈಸಬೇಕು. ಚರಂಡಿಗಳ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ನಿರಂತರವಾಗಿ ಕಾಪಾಡಬೇಕು.
ದೇವದಾಸಿ ಮಹಿಳೆಯರ ಕಲ್ಯಾಣ: ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಕಲ್ಯಾಣ ಸೌಲಭ್ಯಗಳು ಹಾಗೂ ಮಾಸಾಶನವನ್ನು ಸಮರ್ಪಕವಾಗಿ ತಲುಪಿಸಬೇಕು.
ಉಚಿತ ಆರೋಗ್ಯ ಸೇವೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು.
ಮದ್ಯದಂಗಡಿ ಸ್ಥಳಾಂತರ: ಗ್ರಾಮಗಳ ಸಾಮಾಜಿಕ ವಾತಾವರಣ ಕಾಪಾಡುವ ಉದ್ದೇಶದಿಂದ ಮದ್ಯದಂಗಡಿಗಳನ್ನು ಗ್ರಾಮಗಳ ವಸತಿ ಪ್ರದೇಶದಿಂದ ಕನಿಷ್ಠ ಒಂದು ಕಿ.ಮೀ. ದೂರಕ್ಕೆ ಸ್ಥಳಾಂತರಿಸಬೇಕು.
ವಿವಿಧ ಪಂಚಾಯಿತಿಗಳಿಗೆ ಮನವಿ :
ತಾಲೂಕಿನ ಕಂದಗಲ್, ರಾಂಪುರ, ಕಾಳಾಪುರ ಹಾಗೂ ಉಜ್ಜಿನಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಕಾರ್ಯದರ್ಶಿ ರೇಣುಕಮ್ಮ, ರಾಜು ಗೌಡ್ರು, ಉಜ್ಜಿನಿ ಉಮೇಶ ಎಚ್., ಕೊಟ್ರ ಬಸಣ್ಣ, ರುದ್ರೇಶ್ ಜಾಗಟಗೆರೆ, ಕಾಳಾಪುರ ದುರ್ಗಮ್ಮ, ಬಿ. ಮಂಜುನಾಥ, ಎಚ್. ರಾಜು ಗೌಡ, ಕಲ್ಯಾಣಮ್ಮ, ವೆಂಕಮ್ಮ, ವೀರಮ್ಮ, ಮೂಗಣ್ಣ, ಒಬಕ್ಕ, ಶ್ರೀದೇವಿ, ಗೌರಮ್ಮ, ರೇಣುಕಾ, ಕೊಟ್ರೇಶಣ್ಣ, ಈರಮ್ಮ, ಗಂಗಮ್ಮ ಸೇರಿದಂತೆ ದೇವದಾಸಿ ಮಹಿಳಾ ಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.






