Vijayanagara | ಮಳೆ ಕೊರತೆಯಿಂದ ಬೆಳೆ ಹಾನಿ: ಮೊರಬ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಕೂಡ್ಲಿಗಿ (ವಿಜಯನಗರ): ತಾಲೂಕಿನಲ್ಲಿ ಮಳೆಯ ಅಭಾವದಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮದ್ ಅಲಿ ಅಕ್ರಂ ಷಾ ನೇತೃತ್ವದ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಮಂಗಳವಾರ ರಾಷ್ಟ್ರೀಯ ಹೆದ್ದಾರಿ–50ರ ಅಮ್ಮನಕೇರಿ ಕ್ರಾಸ್ ಸಮೀಪದ ಮೊರಬ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿತು.
ರೈತ ಎಂ.ಎಂ. ಸಿದ್ದಯ್ಯ ಅವರ ಜಮೀನಿನಲ್ಲಿರುವ ಮೆಕ್ಕೆಜೋಳದ ಬೆಳೆ ವೀಕ್ಷಿಸಿದ ಅಧಿಕಾರಿಗಳು, ಮಳೆ ಕೊರತೆಯಿಂದ ಉಂಟಾದ ಹಾನಿಯ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ರೈತರು, ಸಾಲ ಮಾಡಿ ಬೀಜ ಹಾಗೂ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರೂ, ಸಮಯಕ್ಕೆ ಮಳೆಯಾಗದ ಕಾರಣ ಬೆಳೆ ಸಂಪೂರ್ಣ ಒಣಗಿದೆ. ಇತ್ತೀಚೆಗೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ಬೆಳೆ ಹಸಿರಾಗಿ ಕಾಣುತ್ತಿದ್ದರೂ, ಈಗ ಮಳೆ ಬಂದರೂ ಬೆಳೆ ಉಳಿಯುವ ಸಾಧ್ಯತೆ ಇಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಭೇಟಿ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಆರ್.ವಿ. ತೇಜವರ್ಧನ್, ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಕೃಷಿ ಅಧಿಕಾರಿ ಸಾವಿತ್ರಿ, ಗ್ರಾಮ ಆಡಳಿತಾಧಿಕಾರಿ ಶಶಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.






