Vijayanagara | ದಿನವಹಿ ತರಕಾರಿ ಮಾರುಕಟ್ಟೆ, ಟೌನ್ ರೀಡಿಂಗ್ ರೂಂ ತಕ್ಷಣ ಉದ್ಘಾಟಿಸಲು ಆಗ್ರಹ

ಹೊಸಪೇಟೆ/ವಿಜಯನಗರ: ಬಹುಕಾಲದಿಂದ ನಿರ್ಮಾಣ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣದ ದಿನವಹಿ ತರಕಾರಿ ಮಾರುಕಟ್ಟೆ ಹಾಗೂ ಟೌನ್ ರೀಡಿಂಗ್ ರೂಂ ಅನ್ನು ಕೂಡಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಪದಾಧಿಕಾರಿಗಳು ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಹೊಸಪೇಟೆ ನಗರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ದಿನವಹಿ ತರಕಾರಿ ಮಾರುಕಟ್ಟೆ ಹಾಗೂ ಸ್ಥಳೀಯ ಕಲಾವಿದರ ಸಾಂಸ್ಕೃತಿಕ, ಸಾಹಿತ್ಯ ಮತ್ತು ಸಭಾ ಚಟುವಟಿಕೆಗಳಿಗಾಗಿ ನಿರ್ಮಿಸಿರುವ ಟೌನ್ ರೀಡಿಂಗ್ ರೂಂ ಹಲವು ವರ್ಷಗಳಿಂದ ಉದ್ಘಾಟನೆಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ದೂರಲಾಗಿದೆ.
ಉದ್ಘಾಟನೆ ವಿಳಂಬದಿಂದ ಎರಡೂ ಕಟ್ಟಡಗಳು ಹಾಳಾಗುವ ಸ್ಥಿತಿಗೆ ತಲುಪಿವೆ. ತರಕಾರಿ ಮಾರುಕಟ್ಟೆಯಲ್ಲಿ ಇಲಿ-ಹೆಗ್ಗಣಗಳು ಬಿಲ ತೋಡಿ ಕಟ್ಟಡದ ಸುರಕ್ಷತೆಗೆ ಧಕ್ಕೆ ಉಂಟುಮಾಡುತ್ತಿದ್ದು, ಟೌನ್ ರೀಡಿಂಗ್ ರೂಂನಲ್ಲಿ ರಾತ್ರಿ ವೇಳೆ ಕುಡುಕರು ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರು ಆಶ್ರಯ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣಗೊಂಡಿರುವ ಈ ಸೌಲಭ್ಯಗಳನ್ನು ಜನರ ಬಳಕೆಗೆ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಸಮಿತಿ ಆರೋಪಿಸಿದೆ.
ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಎರಡೂ ಕಟ್ಟಡಗಳನ್ನು ಶೀಘ್ರ ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಎದುರು ಫೆರಾವ್ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪಿ.ವಿ. ವೆಂಕಟೇಶ್, ಉಪಾಧ್ಯಕ್ಷ ಗುಜ್ಜಲ ಗಣೇಶ್, ಎ. ಮಂಜುನಾಥ್, ವಾದಿರಾಜ್, ಎನ್. ರಾಮು (ಟಿ.ಬಿ. ಡ್ಯಾಂ), ಪಿ. ರಾಮು, ಮರಿಸ್ವಾಮಿ, ಗುಂಡಿ ರಮೇಶ್, ರಜಾಕ್, ನಬೀಸಾಬ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.






