Vijayanagara | ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಕೊಟ್ಟೂರು (ವಿಜಯನಗರ): ಅಂಗನವಾಡಿ ಕೆಲಸದ ಜೊತೆಗೆ ಹೆಚ್ಚುವರಿ ಕೆಲಸಗಳನ್ನು ನಿಯೋಜಿಸುವುದನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಫೆಡರೇಷನ್ ತಾಲೂಕು ಘಟಕದ ಅಧ್ಯಕ್ಷೆ ಎನ್. ರತ್ನಮ್ಮ ಒತ್ತಾಯಿಸಿದರು.
ಫೆಡರೇಷನ್ ವತಿಯಿಂದ ಮಂಗಳವಾರ ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಗೌರವಧನ ಹೆಚ್ಚಿಸಬೇಕು. ನಿವೃತ್ತರಾದವರಿಗೆ ಗ್ರಾಚ್ಯುಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎ. ದ್ರಾಕ್ಷಾಯಿಣಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಫೆಡರೇಷನ್ ಪದಾಧಿಕಾರಿಗಳಾದ ಸಂತೋಷ, ಎಚ್. ತಿಪ್ಪಮ್ಮ, ಕೆ.ಎಂ. ಮಂಜುಳ, ಬಿ.ಎಸ್. ಬಸಮ್ಮ, ಬಿ. ವಸಂತ, ಎಂ. ಶಾಂತ, ನಿರ್ಮಲ, ಪಿ. ಗೀತಾ, ಶೋಭಾ, ನಾಗಮ್ಮ, ಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






