Vijayanagara | ವಿಶೇಷ ನೀರಿನ ಪರೀಕ್ಷೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

ವಿಜಯನಗರ(ಹೊಸಪೇಟೆ), ಮೇ.25: ಗ್ರಾಮೀಣ ಭಾಗದ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮೇ 25ರಿಂದ ಜೂನ್ 10ರವರೆಗೆ ವಿಶೇಷ ನೀರಿನ ಪರೀಕ್ಷೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಗರದ ತಾಲೂಕು ಪಂಚಾಯಿತಿ ವಿದ್ಯಾರಣ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಜಲಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಮ ಪಂಚಾಯಿತಿಗಳು ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದು ಸೂಚಿಸಿದರು.
ಕಾಲರಾ, ಕಾಮಾಲೆ, ಅತಿಸಾರ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಕ್ಲೋರಿನೇಷನ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ಅನುಸರಿಸಬೇಕು ಹಾಗೂ ಸಾರ್ವಜನಿಕರಲ್ಲಿ ಶುದ್ಧ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಹಾಗೂ ನೀರು ಸರಬರಾಜು ಸಿಬ್ಬಂದಿಗೆ ನೀರಿನ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು.
ಹಿರಿಯ ರಸಾಯನ ತಜ್ಞರು ನೀರಿನಲ್ಲಿನ ಫ್ಲೋರೈಡ್, ನೈಟ್ರೇಟ್, ಕ್ಲೋರೈಡ್ ಹಾಗೂ ಗಡಸುತನ ಪರೀಕ್ಷಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆಲಂ ಭಾಷಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯ್ ಕುಮಾರ್, ಕಿರಿಯ ಅಭಿಯಂತರ ಸುರೇಶ್, ನರೇಶ್, ಸಹಾಯಕ ಅಭಿಯಂತರರು ಮಹರುದ್ರಗೌಡ, ಹಿರಿಯ ರಸಾಯನ ತಜ್ಞರು ಅರುಣ್ ಕುಮಾರ್. ಜಿ. ವಿ ಸೇರಿದಂತೆ ಹಲವರು ಭಾಗವಹಿಸಿದ್ದರು.






