ಎಚ್‌ಪಿವಿ ಲಸಿಕಾ ಅಭಿಯಾನದಲ್ಲಿ ವಿಜಯನಗರ ಜಿಲ್ಲೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನ

ವಿಜಯನಗರ (ಹೊಸಪೇಟೆ) : ಹೆಣ್ಣು ಮಕ್ಕಳನ್ನು ಎಚ್‌ಪಿವಿ (HPV) ಸೋಂಕಿನಿಂದ ರಕ್ಷಿಸಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎಚ್‌ಪಿವಿ ಲಸಿಕಾ ಅಭಿಯಾನ ಶೇ.95ರಷ್ಟು ಸಾಧನೆ ದಾಖಲಿಸಿದ್ದು, ಈ ಮೂಲಕ ವಿಜಯನಗರ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯ ಜನರು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಮತ್ತು ಸಹಕಾರದಿಂದ ಲಸಿಕಾ ಅಭಿಯಾನ ಯಶಸ್ವಿಯಾಗಿ ಜಾರಿಯಾಗಿದ್ದು, ಇದು ಜಿಲ್ಲೆಗೆ ಹೆಮ್ಮೆಯ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಎಚ್‌ಪಿವಿ ಲಸಿಕೆ ಹೊಸದೇನಲ್ಲ. ಈಗಾಗಲೇ ಜಗತ್ತಿನಾದ್ಯಂತ 50 ಕೋಟಿಗೂ ಹೆಚ್ಚು ಮಕ್ಕಳಿಗೆ ಈ ಲಸಿಕೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಲಸಿಕೆಯ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ, ಇದು ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ದೃಢಪಡಿಸಿದೆ ಎಂದು ಅವರು ಹೇಳಿದರು.
14ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುವಲ್ಲಿ ಈ ಲಸಿಕೆ ಮಹತ್ವದ ಪಾತ್ರ ವಹಿಸುತ್ತದೆ. ಜಿಲ್ಲೆಯಲ್ಲಿ ಈ ಅಭಿಯಾನದಡಿ 15,124 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇದುವರೆಗೆ 10,793 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ‘ಗಾರ್ಡಾಸಿಲ್–4’ (Gardasil-4) ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಿದ್ದು, ಅರ್ಹ ಹೆಣ್ಣು ಮಕ್ಕಳು ತಪ್ಪದೇ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.






