ವಿಜಯನಗರ ಜಿಲ್ಲೆಯ ಜಿ.ಬಿ.ಹಂಸಾನಂದ ಆಚಾರ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಜಿ.ಬಿ.ಹಂಸಾನಂದ ಆಚಾರ್ಯ
ವಿಜಯನಗರ/ಹೂವಿನಹಡಗಲಿ: ಶಿಲ್ಪಕಲಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆ ಮಾಡಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರಿಯ ಶಿಲ್ಪಿ ಜಿ.ಬಿ.ಹಂಸಾನಂದ ಆಚಾರ್ಯ ಅವರಿಗೆ ಈ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪ್ರಕಟವಾಗಿದೆ.
1932ರಲ್ಲಿ ಜನಿಸಿದ 94 ವರ್ಷದ ಹಂಸಾನಂದ ಆಚಾರ್ಯ ಅವರು ವಂಶಪಾರಂಪರ್ಯವಾಗಿ ಶಿಲ್ಪಕಲೆಯನ್ನು ರೂಢಿಸಿಕೊಂಡವರು. ಕಲ್ಲಿನ ಮೂರ್ತಿಗಳು, ರಥಗಳು, ಲೋಹದ ವಿಗ್ರಹಗಳು ಹಾಗೂ ಭವ್ಯ ದೇವಾಲಯಗಳ ಗೋಪುರಗಳ ನಿರ್ಮಾಣದಲ್ಲಿ ಅವರು ಅದ್ವಿತೀಯ ನೈಪುಣ್ಯತೆ ಹೊಂದಿದ್ದಾರೆ. ಹೂವಿನಹಡಗಲಿಯ ತಮ್ಮ ‘ಶ್ರೀ ಭುವನೇಶ್ವರಿ ಶಿಲ್ಪಕಲಾ ನಿಕೇತನ’ ಸಂಸ್ಥೆಯ ಮೂಲಕ ಇಂದಿಗೂ ನೂರಾರು ಕಲಾಸಕ್ತರಿಗೆ ಗುರುಕುಲ ಮಾದರಿಯಲ್ಲಿ ಉಚಿತ ತರಬೇತಿ ನೀಡುತ್ತಾ ಶಿಲ್ಪಕಲೆಯ ಪರಂಪರೆಯನ್ನು ಬೆಳೆಸುತ್ತಿದ್ದಾರೆ.
ಅವರ ನಿಸ್ವಾರ್ಥ ಕಲಾಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದೆ. ಇದರಿಂದ ಜಿಲ್ಲೆಯ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಹರ್ಷ ವ್ಯಕ್ತವಾಗಿದೆ.
Next Story




