Vijayanagara | 6.95 ಲಕ್ಷ ಪಡಿತರ ಫಲಾನುಭವಿಗಳ ಇ-ಕೆವೈಸಿ ಬಾಕಿ: ಸೆ.30ರೊಳಗೆ ಪೂರ್ಣಗೊಳಿಸಲು ಸೂಚನೆ

ವಿಜಯನಗರ (ಹೊಸಪೇಟೆ) : ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಐದು ವರ್ಷಗಳ ಹಿಂದೆ ಇ-ಕೆವೈಸಿ ಪೂರ್ಣಗೊಳಿಸಿದ್ದ ಪಡಿತರ ಫಲಾನುಭವಿಗಳಿಗೂ ಮತ್ತೊಮ್ಮೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಈ ಕುರಿತು ಜಿಲ್ಲೆಯಾದ್ಯಂತ ಹಲವು ಬಾರಿ ವ್ಯಾಪಕ ಪ್ರಚಾರ ನೀಡಿದ್ದರೂ, ಈವರೆಗೆ 6,95,979 ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ 1,71,427, ಹಗರಿಬೊಮ್ಮನಹಳ್ಳಿಯಲ್ಲಿ 99,744, ಹೊಸಪೇಟೆಯಲ್ಲಿ 1,51,170, ಹಡಗಲಿಯಲ್ಲಿ 1,11,762, ಕೂಡ್ಲಿಗಿಯಲ್ಲಿ 1,14,678 ಹಾಗೂ ಕೊಟ್ಟೂರು ತಾಲೂಕಿನಲ್ಲಿ 47,198 ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿದೆ.
ಬಾಕಿ ಉಳಿದಿರುವ ಎಲ್ಲ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗಾಗಿ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸಂಪೂರ್ಣ ಉಚಿತವಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.




