Vijayanagara | ಸಾವಯವ ಕೃಷಿಯಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಒತ್ತು: ರೈತರಿಗೆ ಪ್ರಾಯೋಗಿಕ ತರಬೇತಿ

ಕೊಟ್ಟೂರು (ವಿಜಯನಗರ) : ಸಾವಯವ ಕೃಷಿ ಹಾಗೂ ರಾಸಾಯನಿಕ ಕೃಷಿಯ ಆಯ್ಕೆಯ ಕುರಿತು ಗೊಂದಲದಲ್ಲಿದ್ದ ರೈತರಿಗೆ ಇಕ್ರಾ ಸಂಸ್ಥೆ ದಿಕ್ಸೂಚಿಯಾಗಿದೆ. ಸಾವಯವ ಕೃಷಿ ಮಾಡುವ ರೈತರು ದೃಢ ನಿರ್ಧಾರ, ಶ್ರದ್ಧೆ ಹಾಗೂ ಕಲಿಕೆಯ ಹಂಬಲ ಹೊಂದಿರಬೇಕು. ಆಗ ಮಾತ್ರ ಸಂಸ್ಥೆ ನೀಡುವ ಪ್ರಾಯೋಗಿಕ ತರಬೇತಿಗಳು ರೈತರ ಕೃಷಿ ಉದ್ದೇಶಗಳಿಗೆ ಫಲ ನೀಡಲು ಸಾಧ್ಯ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟರು.
ಕಳೆದ ಎರಡು ದಶಕಗಳಿಂದ ರೈತರೊಂದಿಗೆ ಸಾವಯವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇಕ್ರಾ ಸಂಸ್ಥೆಯು ಕಾಲಕ್ಕೆ ಅನುಗುಣವಾಗಿ ಯೋಜನೆ ರೂಪಿಸಿ, ರೈತರಿಗೆ ತರಬೇತಿ ಹಾಗೂ ಪ್ರಾಯೋಗಿಕ ಕೃಷಿ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾ ಕೊಟ್ಟೂರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
ರೈತರಿಗಾಗಿ ಇಕ್ರಾ ಸಂಸ್ಥೆಯ ವತಿಯಿಂದ ಭಾನುವಾರ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ಕೆ. ಮಂಜುನಾಥ ಅವರ ಜಮೀನಿನಲ್ಲಿ ‘ಜೀವಚೈತನ್ಯ ಕೃಷಿ’ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಇಕ್ರಾ ಸಂಸ್ಥೆಯ ಮುಖ್ಯಸ್ಥೆ ವಿ. ಗಾಯತ್ರಿ, ರೈತರಿಗೆ ಜೈವಿಕ ವಿಧಾನಗಳ ಮೂಲಕ ರೋಗ ಹಾಗೂ ಕೀಟಬಾಧೆಯಿಂದ ಮುಕ್ತಿ ಪಡೆಯುವ ವಿಧಾನ, ಭೂಮಿಯ ಫಲವತ್ತತೆ ಹೆಚ್ಚಿಸುವುದರಿಂದ ದೊರೆಯುವ ಪ್ರಯೋಜನಗಳು, ಸ್ವಾವಲಂಬಿ ಕೃಷಿಗಾಗಿ ಜೈವಿಕ ಗೊಬ್ಬರ ಹಾಗೂ ದ್ರಾವಣಗಳ ತಯಾರಿಕೆ ಕುರಿತು ತರಬೇತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಕೃಷಿ ವಿಜ್ಞಾನಿ ಜೈಸನ್ ಜೆರೋಮ್ ಅವರನ್ನು ತಮಿಳುನಾಡಿನಿಂದ ಕರೆಸಿ, ಸ್ಥಳೀಯ ಸಂಪನ್ಮೂಲಗಳ ಬಳಕೆಯ ಮಹತ್ವ ಹಾಗೂ ಜೀವಚೈತನ್ಯ ಕೃಷಿಯ ಪ್ರಾಯೋಗಿಕ ಕಲಿಕೆ ಕುರಿತು ರೈತರೊಂದಿಗೆ ಸಂವಾದ ಮತ್ತು ತರಬೇತಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ತರಬೇತಿ ನೀಡಿದ ತಮಿಳುನಾಡಿನ ಕೃಷಿ ವಿಜ್ಞಾನಿ ಜೈಸನ್ ಜೆರೋಮ್ ಮಾತನಾಡಿ, ರೈತರು ಆರಂಭದಲ್ಲಿ ಸಾವಯವ ಕೃಷಿ ಮಾಡುತ್ತಾರಾದರೂ, ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಾಗ ಸೂಕ್ತ ಮಾರ್ಗದರ್ಶನವಿಲ್ಲದೆ ರಾಸಾಯನಿಕ ಔಷಧ ಸಿಂಪಡಿಸುತ್ತಾರೆ. ಆದರೆ, ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡೇ ರೋಗ ಹಾಗೂ ಕೀಟಬಾಧೆ ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಿದರು.
ಬೆಳೆಗಳಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗಲು ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ಕುಸಿಯುವುದರ ಜತೆಗೆ ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳು ಸಮರ್ಪಕವಾಗಿ ದೊರೆಯುವುದಿಲ್ಲ. ಬೆಳೆಗಳಿಗೆ ಅಗತ್ಯವಿರುವ ಸಮಯದಲ್ಲಿ ಗೊಬ್ಬರ ಒದಗಿಸುವುದು ಮುಖ್ಯ. ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ರೈತರು ಗಮನಹರಿಸಬೇಕು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳಿಂದ ಸಾವಯವ ಗೊಬ್ಬರ ತಯಾರಿಸಿ, ಸಾರಜನಕ ಒದಗಿಸುವ ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು. ಸಾವಯವ ಕೃಷಿ ಮಾಡಲು ಆಸಕ್ತಿ ಹೊಂದಿರುವ ರೈತರಿಗೆ ಈ ಕುರಿತು ಅಗತ್ಯ ಮಾಹಿತಿ ನೀಡುವುದು ಮುಖ್ಯ ಎಂದು ತಿಳಿಸಿದರು.
ಜೀವಚೈತನ್ಯ ಕೃಷಿಯ ಪ್ರಾಯೋಗಿಕ ತರಬೇತಿಯಲ್ಲಿ ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತ, ಪಂಚಗವ್ಯ, ತ್ರಿಮೂರ್ತಿ ಟಾನಿಕ್ ಹಾಗೂ ಸಿಪಿಸಿ ತಯಾರಿಸುವ ವಿಧಾನಗಳ ಕುರಿತು ಕೃಷಿ ವಿಜ್ಞಾನಿ ಜೈಸನ್ ಜೆರೋಮ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಜೀವಚೈತನ್ಯ ಕ್ಯಾಲೆಂಡರ್ ಬಗ್ಗೆಯೂ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಕ್ರಾ ಸಂಸ್ಥೆಯ ಮುಖ್ಯಸ್ಥ ಪಿ. ಬಾಬು ಹಾಗೂ ಸಾವಯವ ಒಕ್ಕೂಟದ ಅಧ್ಯಕ್ಷೆ ಗೀತಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಡಿವೆಪ್ಪ ಮತ್ತು ತಿಪ್ಪೇರುದ್ರಪ್ಪ ಪ್ರಾರ್ಥಿಸಿದರು. ಮಂಜುನಾಥ ಕೆ. ನಿರೂಪಿಸಿದರು. ಕೋಗಳಿ ಕೊಟ್ರೇಶ್ ಸ್ವಾಗತಿಸಿದರು. ಕೋಟೆಗೌಡ ವಂದಿಸಿದರು. ತರಬೇತಿಯಲ್ಲಿ 200ಕ್ಕೂ ಹೆಚ್ಚು ರೈತರು ಭಾಗವಹಿಸಿ ಪ್ರಯೋಜನ ಪಡೆದರು.






