Vijayanagara | ಬಾಲ್ಯ ವಿವಾಹ ಮುಕ್ತ ಜಿಲ್ಲೆಗೆ ಎಲ್ಲರ ಸಹಕಾರ ಅಗತ್ಯ: ಪಿ.ಎನ್.ಲೋಕೇಶ್

ವಿಜಯನಗರ(ಹೊಸಪೇಟೆ) : ವಿಜಯನಗರ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು, ವಿವಿಧ ಸಮುದಾಯಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರದ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಸಬಲೀಕರಣ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಪಿಡುಗಾಗಿದೆ. ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದಿದ್ದರೂ ಹಾಗೂ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಬಾಲ್ಯ ವಿವಾಹಗಳು ಇಂದಿಗೂ ನಡೆಯುತ್ತಿರುವುದು ವ್ಯವಸ್ಥೆಯ ಲೋಪವನ್ನು ತೋರಿಸುತ್ತದೆ. ಕೇವಲ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದಾಗ ಮಾತ್ರ ಗಮನಹರಿಸದೆ, ಅಧಿಕಾರಿಗಳು ಇದನ್ನು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿ ಸ್ವೀಕರಿಸಿ ಬಾಲ್ಯ ವಿವಾಹ ತಡೆಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಗುಳೆ ಹೋಗುವ ಕುಟುಂಬಗಳ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಕೊಟ್ಟೂರು, ಹೂವಿನಹಡಗಲಿ ಹಾಗೂ ಕೂಡ್ಲಿಗಿ ಭಾಗಗಳಲ್ಲಿ ದೀಪಾವಳಿ ಹಬ್ಬದ ನಂತರ ಜನರು ಕೆಲಸಕ್ಕಾಗಿ ಬೇರೆಡೆಗೆ ಗುಳೆ ಹೋಗುತ್ತಾರೆ. ಈ ಸಂದರ್ಭದಲ್ಲಿ ವೃದ್ಧರ ಆಶ್ರಯದಲ್ಲಿ ಉಳಿಯುವ ಹೆಣ್ಣುಮಕ್ಕಳು ಬಾಲ್ಯ ವಿವಾಹದಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಹಾಗೂ ನಿಗಾ ವಹಿಸುವುದು ಅತ್ಯಗತ್ಯ ಎಂದು ಲೋಕೇಶ್ ತಿಳಿಸಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಮಲ್ಲೇಶ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಗ್ರಾಮೀಣ ಭಾಗದ ಕೆಲವು ಸಮುದಾಯಗಳಲ್ಲಿ ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಪ್ರಕರಣಗಳು ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಶಾಲಾ-ಕಾಲೇಜುಗಳಿಂದ ದೂರ ಉಳಿಯುವ ಹಾಗೂ ಶಿಕ್ಷಣದಿಂದ ವಂಚಿತರಾಗುವ ಮಕ್ಕಳು ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಒಳಗಾಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಶಾಲಾ-ಕಾಲೇಜುಗಳು ಹಾಗೂ ಹಳ್ಳಿಗಳ ಹಟ್ಟಿಗಳಲ್ಲಿ ‘ವಿಜಯ ಪಡೆ’ ಮೂಲಕ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ‘ಗುಡ್ ಟಚ್–ಬ್ಯಾಡ್ ಟಚ್’ ಮತ್ತು ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ತಿಳುವಳಿಕೆ ಮೂಡಿಸಲಾಗುತ್ತಿದೆ. ಮಹಿಳಾ ಪೊಲೀಸ್ ಸಿಬ್ಬಂದಿ, ಪೊಲೀಸ್ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆಗಳ ಕುರಿತು ಮಾಹಿತಿ ನೀಡಿ, ತುರ್ತು ಸಂದರ್ಭದಲ್ಲಿ ನೆರವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ ಕೆ. ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ವ್ಯವಸ್ಥೆಗಳ ಸಬಲೀಕರಣ ಸಮಾಲೋಚನಾ ಕಾರ್ಯಾಗಾರದಲ್ಲಿ ಯುನಿಸೆಫ್ ಯೋಜನೆ ಪ್ರಾದೇಶಿಕ ಸಂಯೋಜಕ ಡಾ. ಕೆ. ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳ ಅನುಷ್ಠಾನ ಮತ್ತು ಸಂರಕ್ಷಣಾ ವ್ಯವಸ್ಥೆಗಳ ಸಬಲೀಕರಣ, ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವಿಕೆ ಹಾಗೂ ಮಕ್ಕಳ ಜೀವನಚಕ್ರ ಯೋಜನೆಗಳ ಕುರಿತು ವಿಸ್ತೃತವಾಗಿ ಉಪನ್ಯಾಸ ನೀಡಿದರು.
ಯುನಿಸೆಫ್ ಯೋಜನೆಯ ಸಂಯೋಜಕ ಹರೀಶ್ ಜೋಗಿ ಅವರು ಮಕ್ಕಳ ರಕ್ಷಣಾ ವ್ಯವಸ್ಥೆಗಳ ಸಬಲೀಕರಣ ಯೋಜನೆ ಹಾಗೂ ಪ್ರಬುದ್ಧತಾ ಮಾದರಿ ಸೂಚಕದ ಕುರಿತು ಉಪನ್ಯಾಸ ನೀಡಿದರು. ಮತ್ತೋರ್ವ ಯೋಜನಾ ಸಂಯೋಜಕಿ ಸಿಸ್ಟರ್ ದುಲ್ಸಿನ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ಮುಂದಿನ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಧೀರ್ ಕುಮಾರ್ ಉಪಸ್ಥಿತರಿದ್ದರು. ಶರಣಪ್ಪ ಜಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.






