Vijayanagara | ಸ್ಥಳೀಯ ಜವಳಿ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಿ : ಮಹಾಂತೇಶ್ ಕಂಚಿಮಠ
ಒಂದು ದಿನದ ‘ರಫ್ತು ಪ್ರೋತ್ಸಾಹನ ಕಾರ್ಯಾಗಾರ’

ವಿಜಯನಗರ (ಹೊಸಪೇಟೆ) : ಜವಳಿ ಮತ್ತು ಕೈಮಗ್ಗ ಕ್ಷೇತ್ರದ ಉದ್ಯಮದಾರರು ಸ್ಥಳೀಯವಾಗಿ ಉತ್ಪಾದಿಸುವ ಗುಣಮಟ್ಟದ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಮೂಲಕ ಉದ್ಯಮದ ಬೆಳವಣಿಗೆ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಕೆ.ಜಿ. ಕಂಚಿಮಠ ಕರೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಜವಳಿ ಹಾಗೂ ಕೈಮಗ್ಗ ವಲಯದ ಉದ್ಯಮದಾರರು, ನೇಕಾರರು ಮತ್ತು ಉದ್ದಿಮೆದಾರರಿಗಾಗಿ ಗುರುವಾರ ನಗರದ ನೆಹರು ಕಾಲೋನಿಯ ಬಲ್ಡೋಟ ಪಾರ್ಕ್ ಎದುರಿನ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಭವನದಲ್ಲಿ ಆಯೋಜಿಸಿದ್ದ ಒಂದು ದಿನದ ‘ರಫ್ತು ಪ್ರೋತ್ಸಾಹನ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯಲ್ಲಿ ಕೈಮಗ್ಗ, ಜವಳಿ ಹಾಗೂ ಸಿದ್ಧ ಉಡುಪು ಉದ್ಯಮಗಳ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಸ್ಥಳೀಯ ಉದ್ಯಮದಾರರು ಸಾಂಪ್ರದಾಯಿಕ ಉತ್ಪಾದನೆಯ ಜೊತೆಗೆ ರಫ್ತು ವಹಿವಾಟಿನತ್ತಲೂ ಹೆಚ್ಚಿನ ಆಸಕ್ತಿ ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಮತ್ತು ಸಹಾಯಧನಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಉದ್ಯಮಗಳನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಉತ್ತರ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ. ವಿಠಲರಾಜು ಮಾತನಾಡಿ, ಜವಳಿ ಕ್ಷೇತ್ರದಲ್ಲಿ ರಫ್ತು ವಹಿವಾಟು ಹೆಚ್ಚಿಸಲು ಉತ್ಪನ್ನಗಳ ಗುಣಮಟ್ಟ ಕಾಪಾಡುವುದು ಅತ್ಯಗತ್ಯ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ, ಗ್ರಾಹಕರ ಅಭಿರುಚಿ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಉತ್ಪಾದನೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಬಂಕದ್ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳು, ಪ್ರೋತ್ಸಾಹಕ ಯೋಜನೆಗಳು ಹಾಗೂ ಅವುಗಳನ್ನು ಪಡೆದುಕೊಳ್ಳುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಹೊಸಪೇಟೆ ಕೈಮಗ್ಗ ನೇಕಾರರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಉದ್ಯಮದಾರ ಮಲ್ಲಿಕಾರ್ಜುನ ಕೆ. ಮಾತನಾಡಿ, ಕಾರ್ಯಾಗಾರದಲ್ಲಿ ದೊರೆತ ಮಾಹಿತಿಯನ್ನು ಉದ್ಯಮದಾರರು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ರಫ್ತು ವಹಿವಾಟು ಪ್ರಾರಂಭಿಸಿ, ಅನುಭವ ಮತ್ತು ಮಾರುಕಟ್ಟೆ ಸಂಪರ್ಕ ಹೆಚ್ಚಾದಂತೆ ಉದ್ಯಮವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಅಂಚೆ ಇಲಾಖೆಯ ಹೆಡ್ ಪೋಸ್ಟ್ ಮಾಸ್ಟರ್ ಮಂಜುನಾಥ ಕೆ., ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಎಸ್. ಮಲ್ಲಾನಾಯ್ಕ, ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ಹೊಸಪೇಟೆ ಶಾಖೆಯ ವ್ಯವಸ್ಥಾಪಕ ಸಂಗಪ್ಪ ಕಂಬಳಿ, ಎಲ್. ಪ್ರವೀಣ ರಾಜ ನಾಯಕ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಮಂಜುಳ ಉಪಸ್ಥಿತರಿದ್ದರು.






