Vijayanagara | ರೈತರಿಗೆ ಹಕ್ಕುಪತ್ರ ನೀಡಿ, ಸಂಪೂರ್ಣ ಸಾಲಮನ್ನಾ ಮಾಡಲು ರೈತ ಸಂಘ ಆಗ್ರಹ

ಹೊಸಪೇಟೆ/ವಿಜಯನಗರ: ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಬುಧವಾರ ಬೃಹತ್ ಬೈಕ್ ರ‍್ಯಾಲಿ ಹಾಗೂ ಪ್ರತಿಭಟನೆ ನಡೆಯಿತು.
ಮರಿಯಮ್ಮನಹಳ್ಳಿ ಮುಖ್ಯ ಸರ್ಕಲ್‌ನಿಂದ ಆರಂಭವಾದ ಬೈಕ್ ರ‍್ಯಾಲಿಯು ಎಪಿಎಂಸಿ, ಶಾನ್‌ಬಾಗ್ ಸರ್ಕಲ್ ಹಾಗೂ ತಾಲೂಕು ಕಚೇರಿ ಮಾರ್ಗವಾಗಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಸಿದ ರೈತ ಸಂಘದ ಮುಖಂಡರು, ವಿವಿಧ ಬೇಡಿಕೆಗಳನ್ನೊಳಗೊಂಡ ಒತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೆರೆ ಅವರಿಗೆ ಸಲ್ಲಿಸಿದರು.
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಡಣಾಯಕನಕೆರೆ, ನಂದಿಬಂಡಿ ಹಾಗೂ ನಾಗಲಾಪುರ ಕಂದಾಯ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕುಪತ್ರ ನೀಡಬೇಕು. ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಸಾಲ ವಸೂಲಾತಿಗೆ ತಡೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿತು.
ತುಂಗಭದ್ರಾ ಅಣೆಕಟ್ಟು ಹಾಗೂ ಹಿನ್ನೀರಿನ ಸದುಪಯೋಗ ಪಡೆದು ಕೆರೆ-ಕಟ್ಟೆಗಳನ್ನು ತುಂಬಿಸುವ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಬರ ಹಾಗೂ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಮರ್ಪಕ ಪರಿಹಾರ ನೀಡಬೇಕು. ಬೆಳೆ ವಿಮೆ ಪರಿಹಾರವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಲಾಯಿತು.
ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ ಆದ್ಯತೆ ನೀಡಬೇಕು ಮತ್ತು ಗ್ರಾಮೀಣ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಜಿಲ್ಲಾ ಗೌರವಾಧ್ಯಕ್ಷ ಬಾಣದ ಶಿವಪ್ಪ, ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಶಿವರಾಜ್ ಹೊಳಗುಂದಿ, ರಮೇಶ್ ನಾಯಕ್, ಹುಸೇನ್ ಸಾಬ್, ಎಚ್. ದುರ್ಗಪ್ಪ, ಶೇಖರ್ ನಾಯಕ್, ಕಾಸಿಂ, ಕೆ. ಯಮನೂರಪ್ಪ, ಕಾಶಿಂ ಸಾಹೇಬ್ ಎಲ್‌ಎಲ್‌ಬಿ, ಟಿ. ಹನುಮಂತಪ್ಪ, ಹುಚ್ಚ ಸಾಬ್, ಕರಿಯಪ್ಪ, ಗಂಟೆ ಸೋಮಶೇಖರ, ಅಂಗಡಿ ಹುಲಗಪ್ಪ, ಕಾಶಿಪೀರಾ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಮಹಿಳಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






